ಕಾಳಗಿ: ತಾಲೂಕಿನ ತೆಂಗಳಿ ಗ್ರಾಮ ಪಂಚಾಯತಿಯ ಒಟ್ಟು 19 ಸದಸ್ಯರ ಗೌರವ ಧನದ 19 ಚೇಕ್ ಗಳನ್ನು ತನ್ನ ಹೆಸರಿಗೆ ಡ್ರಾ ಮಾಡಿಕೊಂಡ ಆರೋಪದಡಿ ತೆಂಗಳಿ ಗ್ರಾ.ಪಂ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಶಾಮರಾವ ತಳವಾರ ಅವರನ್ನು ಕರ್ನಾಟಕ ಗ್ರಾಮ ಸ್ವರಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಆದೇಶದ ಮೇರೆಗೆ ಗ್ರಾ.ಪಂ ಅಧ್ಯಕ್ಷರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಗ್ರಾ.ಪಂ ಹಿಂದಿನ ಅಧ್ಯಕ್ಷೆ ಸುಮಿತ್ರಾ ಚೌವ್ಹಾಣ ದೂರು ನೀಡಿದ ಹಿನ್ನೆಲೆಯಲ್ಲಿ ಈ ಸಿಬ್ಬಂದಿಯನ್ನು ಇಲಾಖೆ ವಿಚಾರಣೆಗೆ ಒಳಪಡಿಸಲಾಗಿತ್ತು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕಿಲ್ಲದೆ ಹಣ ಡ್ರಾ ಮಾಡಿರುವುದಕ್ಕೆ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ತಳವಾರ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ. ಹೀಗಾಗಿ ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಡಿಸಿಬಿ ರೆಜಿಸ್ಟರ್ ಹಾಗೂ ಪಿಒಎಸ್ ಮಶೀನ್ ಸೇರಿ ಕಛೇರಿಗೆ ಸೇರಿದ ಎಲ್ಲ ದಾಖಲೆಗಳನ್ನು ಕಾರ್ಯಾಲಯಕ್ಕೆ ಒಪ್ಪಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 19 ಗ್ರಾ.ಪಂ ಸದಸ್ಯರ ಗೌರವ ಧನದ ಚೆಕ್ ಗಳಲ್ಲಿ ಎರಡು ಚೆಕ್ಗಳು ರಿಜೆಕ್ಟ್ ಆಗಿವೆ ಎಂದು ಸುಳ್ಳು ಹೇಳಿದ ಕರ ವಸೂಲಿಗಾರ ಮಲ್ಲಿಕಾರ್ಜುನ ಶಾಮರಾಯ ತಳವಾರ ಮತ್ತೆ ಎರಡು ಚೆಕ್ಗಳ ಮೇಲೆ ಪಿಡಿಒ ಮತ್ತು ಅಧ್ಯಕ್ಷರ ಸಹಿ ಮಾಡಿಸಿಕೊಂಡು, ಕಾಂತಮ್ಮ ಫಕೀರಯ್ಯ ಕೋಣಿನ್ ಹೆಸರಿನಲ್ಲಿ ಮತ್ತು ನರಸಿಂಗ ಹಣಮಂತ ಹೆಸರಿನಲ್ಲಿ ಹಣ ದುರುಪಯೋಗ ಮಾಡಲಾಗಿದೆ ಎಂದು ಗ್ರಾ.ಪಂ ಸದಸ್ಯರು ಸ್ಪಷ್ಟಪಡಿಸಿದ್ದರು.
ಮಂಗಮಾಯವಾಗಿತ್ತು ಗಾಂಧಿ ಗ್ರಾಮ ಪುರಸ್ಕಾರದ 5 ಲಕ್ಷ ರೂ.
ತೆಂಗಳಿ ಗ್ರಾ.ಪಂ’ಗೆ ಸರಕಾರದಿಂದ ನೀಡಲಾದ ಗಾಂಧಿ ಗ್ರಾಮ ಪುರಸ್ಕಾರದ 5 ಲಕ್ಷ ರೂ. ಗೌರವ ಧನವನ್ನು ಸದ್ದಿಲ್ಲದೆ ಮಂಗಮಾಯ ಮಾಡಿ ಬಿಲ್ ಕಲೆಕ್ಟರ್ ಎಲ್ಲರಿಗೂ ಚಳ್ಳೆ ಹಣ್ಣು ತಿನಿಸಿದ್ದ. ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ ಮೇಲೆ ಮತ್ತೆ ಖಾತೆಗೆ ಜಮಾ ಮಾಡಿದ್ದಾನೆ ಎಂದು ತೆಂಗಳಿ ಗ್ರಾ.ಪಂ ಹಾಲಿ ಅಧ್ಯಕ್ಷೆ ಗುಂಡಿಬಾಯಿ ರಾಠೋಡ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾ.ಪಂ ಕಾರ್ಯಾಲಯದಲ್ಲಿ ಸರಕಾರದಿಂದ ಬಂದಿರುವ ಅಮಾನತಿನ ಆದೇಶ ಪತ್ರವನ್ನು ಸ್ವತಃ ಕರವಸೂಲಿಗಾರ ಮಲ್ಲಿಕಾರ್ಜುನ ಶಾಮರಾಯ ತಳವಾರ ಅವರಿಂದಲೇ ಓದಿಸಿ ಅಮಾನತು ಆದೇಶ ಪತ್ರವನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಂದ ಬಿಲ್ ಕಲೆಕ್ಟರ್ಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗುಂಡಿಬಾಯಿ ರಾಠೋಡ, ಉಪಾಧ್ಯಕ್ಷ ವಿಜಯಕುಮಾರ ತುಪ್ಪದ, ಸದಸ್ಯರಾದ ಭೀಮರಾವ ಮಾಲಿಪಾಟೀಲ, ಲಕ್ಷ್ಮಣ ರಾಠೋಡ, ಎಂ.ಡಿ ಮುಸ್ತಫಾ, ವಿಜಯಲಕ್ಷ್ಮಿ, ದೇಸು ಚೌವ್ಹಾಣ, ಕಾಶಿಬಾಯಿ ಮಡಕಿ, ಜ್ಯೋತಿ ಮಠ, ಶ್ರೀದೇವಿ ಅರಜಂಬಗಾ, ಗೋರಿಬಿ ದಾದಾಮಿಯ್ಯ, ನಾಗರಾಜ ಕೇಶಾರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಶರ್ಮಾ ಇದ್ದರು.