ಪ್ರಗತಿಶೀಲ ಚಿಂತನೆಗೆ ಪ್ರೇರಣೆ ನೀಡುವ ದೇವನೂರು ಸಾಹಿತ್ಯ

ಜಿಲ್ಲೆ

ಕಲಬುರಗಿ: ದೇವನೂರು ಮಹಾದೇವ ಅವರು ಕೇವಲ ಸಾಹಿತಿ ಮಾತ್ರವಲ್ಲದೆ, ದಲಿತ ಹಕ್ಕುಗಳಿಗಾಗಿ ಹೋರಾಡಿದ ಸಾಮಾಜಿಕ ಹೋರಾಟಗಾರರು ಆಗಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ಸಂಘಟಕರು. ಅವರ ಬರವಣಿಗೆಯು ದಲಿತರ ಮೇಲಿನ ಶೋಷಣೆ, ಕ್ರೌರ್ಯ ಹಾಗೂ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುವ ಮೂಲಕ ಪ್ರಗತಿಶೀಲ ಚಿಂತನೆಗೆ ಪ್ರೇರಣೆ ನೀಡುತ್ತವೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ಸಾಹಿತಿ ದೇವನೂರು ಮಹಾದೇವ ಅವರ 76ನೇ ಜನ್ಮದಿನಾಚರಣೆಯ ಪ್ರಯುಕ್ತ ‘ದೇವನೂರುರ ಬದುಕು-ಬರಹ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ‍್ಯ ನಂತರದ ದಿನಗಳಲ್ಲಿ ಶಿಕ್ಷಣ ಮತ್ತು ಅಂಬೇಡ್ಕರ್ ಅವರ ಚಳವಳಿಯ ಪ್ರಭಾವದಿಂದ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿತು. ಈ ಜಾಗೃತಿಯಿಂದ ದಲಿತ ಲೇಖಕರು ತಮ್ಮ ಬದುಕಿನ ಅಸಮತೋಲನಗಳನ್ನು ಸಾಹಿತ್ಯದಲ್ಲಿ ಅನಾವರಣಗೊಳಿಸಲು ಪ್ರಾರಂಭಿಸಿದರು. ದೇವನೂರು ಮಹಾದೇವ ಅವರ ಬರವಣಿಗೆಯು ಈ ಚಲನೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಶತಮಾನಗಳಿಂದ ದಲಿತರನ್ನು ಕಾಡುತ್ತಿದ್ದ ಅಸ್ಪೃಶ್ಯತೆ, ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಗಳನ್ನು ಕಥೆಗಳಲ್ಲಿ ಆಳವಾಗಿ ಚಿತ್ರಿಸಿದ್ದಾರೆ ಎಂದರು.

ದೇವನೂರು ಅವರು ‘ಒಡಲಾಳ’, ‘ಕುಸುಮಬಾಲೆ’, ‘ದ್ಯಾವನೂರು’, ‘ಮಾರಿಕೊಂಡವರು’, ‘ದತ್ತ’, ‘ಡಾಂಬರು’ ‘ಬಂದರು’, ‘ಅಮಾಸ’, ‘ಮೂಡಲ ಸಿಮೆಯಲ್ಲಿ’, ‘ಕೊಲೆ-ಗಿಲೆ’, ‘ಗ್ರಾಸ್ಥರು, ‘ಎದೆಗೆ ಬಿದ್ದ ಅಕ್ಷರ’, ‘ನೋಡು ಮತ್ತು ಕೂಡು’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ‘ಕೇಂದ್ರ ಸಾಹಿತ್ಯ ಅಕಾಡಮಿ’ ಪ್ರಶಸ್ತಿ, ‘ಕರ್ನಾಟಕದ ರಾಜ್ಯೋತ್ಸವ’ ಪ್ರಶಸ್ತಿ, ‘ಪದ್ಮಶ್ರೀ’ ಪ್ರಶಸ್ತಿ, ‘ರಾಜ್ಯ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ, ಅಲ್ಲಮಪ್ರಭು ಪ್ರಶಸ್ತಿ, ಬೋಧಿವೃಕ್ಷ ಪ್ರಶಸ್ತಿ, ವಿ,ಎಂ.ಇನಾಂದಾರ್ ಪ್ರಶಸ್ತಿ, ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್‌ನ ಗೌರವ, ಮೈಸೂರು ವಿಶ್ವವಿದ್ಯಾನಿಲಯದಿಂದ, ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದು ದೇವನೂರುರ ಬದುಕು-ಬರಹ, ಸಾಮಾಜಿಕ ಕೊಡುಗೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಓಂಕಾರ ವಠಾರ, ತರಬೇತಿ ಸಂಸ್ಥೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *