ಶಿವಮೊಗ್ಗ: ಕನ್ನಡದ ಬಗ್ಗೆ ನನಗೆ ಅಷ್ಟು ತಿಳುವಳಿಕೆ ಇಲ್ಲ. ಆದರೆ ಕನ್ನಡದ ಉಳಿಯುವಿಕೆಗೆ ನನ್ನ ಜವಾಬ್ದಾರಿ ಇದೆ. ಕನ್ನಡದ ಬಗ್ಗೆ ತಿಳಿದುಕೊಳ್ಳದೆ ಇದ್ದರೂ ಅದಕ್ಕಿಂತ ಮಿಗಿಲಾಗಿ ನನಗೆ ಕನ್ನಡದ ಬಗ್ಗೆ ಅಭಿಮಾನ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್‌ನ ಗ್ರಂಥಾಲಯಕ್ಕೆ ನನ್ನ ತಂದೆ ಎಸ್ ಬಂಗಾರಪ್ಪ ಅವರ ಹೆಸರಿನಲ್ಲಿ 5 ಲಕ್ಷ ರೂ. ಅನುದಾನ ನೀಡಿದ್ದೆನೆ. ನಮ್ಮ ತಂದೆ ಬಂಗಾರಪ್ಪ ಅವರು ಕಷ್ಟಪಟ್ಟು ಬೀದಿದೀಪದಲ್ಲಿ ಓದಿಕೊಂಡು ಬಂದವರು. ರನ್ನ, ಪಂಪರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಕನ್ನಡ ಸಹಿತ ಯಾವುದೇ ವಿಷಯ ನೀಡಿದರೂ ನಮ್ಮ ತಂದೆ ಅವರು ಮಾತನಾಡುತ್ತಿದ್ದರು.
ನಾವೆಲ್ಲ ಕಾನ್ವೆಂಟ್‌ನಲ್ಲಿ ಓದಿದವರು. ಹೀಗಾಗಿ ನಾನು ಕನ್ನಡ ಸರಿಯಾಗಿ ಮಾತನಾಡದೆ ಇರಬಹುದು. ಆದರೆ ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು. ಕನ್ನಡ ಮಾಧ್ಯಮದಲ್ಲಿ ಕಲಿಕೆ ಎಂಬುದು ಪೋಷಕರ ವಿವೇಚನೆಗೆ ಬಿಟ್ಟಿದ್ದು ಎಂದರು.