ಕಲಬುರಗಿ: ಹೈನೋದ್ಯಮ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಸೂಕ್ತ ಫಲಾನುಭವಿಗೆ ಸಾಲ ಸೌಲಭ್ಯ, ಸಬ್ಸಿಡಿ, ಶೆಡ್ ನಿರ್ಮಾಣಕ್ಕೆ ಧನ ಸಹಾಯ, ಮೇವು ಕತ್ತರಿಸುವ ಹಾಗೂ ಹಾಲೂ ಕರೆಯುವ ಯಂತ್ರ ನೀಡುವುದು ಸೇರಿದಂತೆ ಇನ್ನಿತರ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ಅಂದಾಗ ಮಾತ್ರ ಹೈನುಗಾರಿಕೆಯತ್ತ ಜನರ ಒಲವು ಹೆಚ್ಚಾಗಲು ಸಾಧ್ಯ ಎಂದು ಹಿರಿಯ ಹೈನುಗಾರಿಕೆ-ರೈತ ಶಾಂತಪ್ಪ ದುಧನ್ ಮಾರ್ಮಿಕವಾಗಿ ನುಡಿದರು.
ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ತಮ್ಮ ಹೈನುಗಾರಿಕೆ ಕೇಂದ್ರದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಏರ್ಪಡಿಸಿದ್ದ ‘ವಿಶ್ವ ಹಾಲು ದಿನಾಚರಣೆ’ಯಲ್ಲಿ ದಂಪತಿ ಸಮೇತ ತಮಗೆ ಜರುಗಿದ ವಿಶೇಷ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಹೆಚ್ಚಳಗೊಳಿಸಬೇಕು ಅಂದಾಗ ಮಾತ್ರ ಹೈನುಗಾರಿಕೆ ಬಗ್ಗೆ ಜನರ ಆಸಕ್ತಿ ಹೆಚ್ಚಾಗಲು ಸಾಧ್ಯ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಹಾಲು ಅಮೃತಕ್ಕೆ ಸಮಾನ. ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವಾಗಿದ್ದು, ಅದನ್ನು ವ್ಯರ್ಥ ಮಾಡಬಾರದು. ವಿಶ್ವದಲ್ಲಿ ಇಂದಿಗೂ ಅನೇಕ ಮಕ್ಕಳು ಹಾಲಿನ ಲಭ್ಯತೆಯಿಂದ ವಂಚಿತರಾಗಿ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಗೆ ಆದ್ಯತೆ ನೀಡಿ ಹಾಲಿನ ಉತ್ಪಾದಕತೆ ವೃದ್ಧಿಗೊಳಿಸುವದರ ಜೊತೆಗೆ, ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಶುದ್ಧ ಹಾಲು ಎಲ್ಲರಿಗೂ ದೊರೆಯುವಂತೆ ಮಾಡುವುದು ಅಗತ್ಯವಾಗಿದೆ. ದುಧನ್ ಅವರು ಕಳೆದ 25 ವರ್ಷಗಳಿಂದ ಹೈನುಗಾರಿಕೆ ಮಾಡಿಕೊಂಡು ಸ್ವಾವಲಂಬನೆ ಜೀವನ ಸಾಗಿಸುತ್ತಾ, ಮಾದರಿಯಾಗಿದ್ದಾರೆ. ಸುಮಾರು 40 ಎಮ್ಮೆಗಳೊಂದಿಗೆ ತಾಲೂಕಿನಲ್ಲಿ ಅಧಿಕ ಪ್ರಮಾಣ ಹಾಲನ್ನು ಉತ್ಪಾದಿಸಿ, ಕ್ಷೀರಕ್ರಾಂತಿ ಮಾಡುತ್ತಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಗತಿಪರ ರೈತ ಕಾಶಿನಾಥ ಚೆಂಗಟಿ, ಪ್ರಮುಖರಾದ ಮಲ್ಲಮ್ಮ ಎಸ್.ದುಧನ್, ಸುಷ್ಮಾ ಕೆ.ಚೇಂಗಟಿ, ಉದಯಕುಮಾರ, ಡಾ.ಕೈಲಾಸ್, ಡಾ.ಶೋಭಾ, ಆಕಾಶ್, ತಿಪ್ಪಣ್ಣ, ರವಿ, ಪಂಡಿ ಧನ್ನಿ, ಸಂಗಮ್ಮ, ಶರಣಬಸಪ್ಪ, ಚನ್ನಮ್ಮ, ಮುಕ್ತಾಬಾಯಿ ಬಂಗರಗಿ, ಕಮಲಾಬಾಯಿ, ಸುವರ್ಣಾ, ಕಾಶಿಬಾಯಿ, ಸವಿತ್ರಾಬಾಯಿ, ಮರೆಪ್ಪ ಸೋಮನಾಥಹಳ್ಳಿ, ಸಂಜು ಕೊಡಲಹಂಗರಗಾ, ರೇಖಾ, ಅಂಬಿಕಾ, ಸಿದ್ದಮ್ಮ ಸೇರಿದಂತೆ ಅನೇಕರು ಇದ್ದರು.