ರಸ್ತೆಯಲ್ಲಿ ಏಕಾಏಕಿ ವಾಹನ ಅಡ್ಡ ಹಾಕುವಂತಿಲ್ಲ, ಕೀ ಕಸಿಯುವಂತಿಲ್ಲ: ಪೊಲೀಸರಿಗೆ ಡಿಜಿಪಿ ಕಟ್ಟಾಜ್ಞೆ

ಸುದ್ದಿ ಸಂಗ್ರಹ ವಿಶೇಷ

ಬೆಂಗಳೂರು: ಮಂಡ್ಯ ಪೊಲೀಸರ ಕರ್ತವ್ಯ ಲೋಪದಿಂದ ಮಗುವೊಂದು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸ್‌ ಇಲಾಖೆ, ತಪಾಸಣೆ ನೆಪದಲ್ಲಿ ಸಕಾರಣವಿಲ್ಲದೆ ವಾಹನಗಳನ್ನು ಏಕಾಏಕಿ ತಡೆದು ನಿಲ್ಲಿಸಬಾರದು ಎಂದು ಕಟ್ಟಾಜ್ಞೆ ಹೊರಡಿಸಿದೆ. ಈ ಕುರಿತು ಶನಿವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸರಿಗೆ ಸುತ್ತೋಲೆ ಹೊರಡಿಸಿರುವ ಪ್ರಭಾರ ಡಿಜಿಪಿ ಡಾ.ಎಂ.ಎ ಸಲೀಂ, ವಾಹನಗಳ ತಪಾಸಣೆ ಸಂಬಂಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ.

ಹೆದ್ದಾರಿಗಳಲ್ಲಿ ಜಿಗ್‌ಜಾಗ್‌ ಬ್ಯಾರಿಕೇಡ್‌ ಅಳವಡಿಸಿ ತಡೆಯಬಾರದು. ರಸ್ತೆಯಲ್ಲಿ ಏಕಾಏಕಿ ಅಡ್ಡಬಂದು ವಾಹನಗಳನ್ನು ನಿಲ್ಲಿಸಬಾರದು. ವಾಹನಗಳ ಕೀ ತೆಗೆದುಕೊಳ್ಳಬಾರದು. ಬೈಕ್‌ನ ಹಿಂಬದಿ ಸವಾರನನ್ನು ಹಿಡಿದು ಎಳೆಯುವಂತಿಲ್ಲ. ಪ್ರಮುಖವಾಗಿ ಇಂಟಿಲೆಜೆನ್ಸ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಟಿಎಂಎಸ್‌) ಜಾರಿಯಿರುವ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ತಂತ್ರಜ್ಞಾನ ಆಧರಿತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲು ಆದ್ಯತೆ ನೀಡಬೇಕು ಎಂದು ಪೊಲೀಸರಿಗೆ ಮಹತ್ವದ ಸೂಚನೆ ನೀಡಿದ್ದಾರೆ.

ರಸ್ತೆಗಳಲ್ಲಿ ಅತಿವೇಗವಾಗಿ ಚಲಾಯಿಸುವ ವಾಹನಗಳನ್ನು ಬೆನ್ನಟ್ಟುವ ಬದಲಿಗೆ ವಾಹನ ಸಂಖ್ಯೆ ಗುರುತು ಮಾಡಿಕೊಂಡು ಜಿಲ್ಲಾ ಸರಹದ್ದುಗಳ ನಿಯಂತ್ರಣ ಕೋಣೆಗಳಿಗೆ ಸಂದೇಶ ರವಾನಿಸಿ ಪ್ರಕರಣ ದಾಖಲಿಸಬೇಕು.

ಸಂಚಾರ ನಿಯಮ ಉಲ್ಲಂಘನೆ ಸಲುವಾಗಿ ವಾಹನಗಳನ್ನು ತಪಾಸಣೆ ಮಾಡುವಾಗ ಪ್ರತಿಫಲನ ಜಾಕೆಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಸಂಜೆ ವೇಳೆ ಎಲ್‌ಇಡಿ ಬಟನ್‌ಗಳನ್ನು ಉಪಯೋಗಿಸಬೇಕು. ಕರ್ತವ್ಯ ನಿರ್ವಹಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್‌ ಕ್ಯಾಮೆರಾ ಧರಿಸಿರಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ, ಇತರ ರಸ್ತೆಗಳಲ್ಲಿ ಯಾವುದೆ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು. ಬದಲಿಗೆ ಫೀಲ್ಡ್‌ ಟ್ರಾಫಿಕ್‌ ವಯಲೇಶನ್‌ ರಿಪೋರ್ಟ್‌ (ಎಫ್‌ಟಿವಿಆರ್‌) ಮುಖಾಂತರ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದ್ದಾರೆ.

ಯಾವುದೆ ವಾಹನ ತಪಾಸಣೆ ಮಾಡುವ ಸ್ಥಳಕ್ಕೆ ಸುಮಾರು 100 ರಿಂದ 150 ಮೀಟರ್‌ ದೂರದ ರಸ್ತೆಯಲ್ಲಿ ರಿಫ್ಲೆಕ್ಟಿವ್‌ ರಬ್ಬರ್‌ ಕೋನ್‌ಗಳು ಹಾಗೂ ಸುರಕ್ಷತಾ ಫಲಕಗಳನ್ನು ಅಳವಡಿಸಿರಬೇಕು. ರಾತ್ರಿ ವೇಳೆ ತಪಾಸಣೆ ಸಾಧ್ಯವಾದಷ್ಟೂ ಜಂಕ್ಷನ್‌ಗಳಲ್ಲಿಯೇ ನಡೆಸಬೇಕು. ಜತೆಗೆ, ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಹೆದ್ದಾರಿಗಳಲ್ಲಿ ನಾಕಾಬಂದಿ ಹಾಕಬಾರದು ಎಂದು ಡಿಜಿಪಿ ಡಾ.ಎಂ.ಎ ಸಲೀಂ ಪೊಲೀಸ್‌ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.

ಮಂಡ್ಯ ಘಟನೆ ಬಳಿಕ ಪೊಲೀಸರ ಮೇಲೆ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸೂಚನೆಗಳನ್ನು ಅವರು ನೀಡಿದ್ದಾರೆ.

Leave a Reply

Your email address will not be published. Required fields are marked *