ತರಕಾರಿ ಸೇವನೆಯಿಂದ ಸದೃಢ ಆರೋಗ್ಯ

ಜಿಲ್ಲೆ

ಕಲಬುರಗಿ: ದೈಹಿಕ, ಮಾನಸಿಕವಾಗಿ ಜೀವಿಸಿ, ಬೆಳವಣಿಗೆ ಹೊಂದಲು, ಆರೋಗ್ಯಕರವಾಗಿರಲು ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಶುದ್ಧ, ಸ್ವಚ್ಛವಾಗಿರುವ ಹಾಗೂ ಆದಷ್ಟು ಸಾವಯುವ ಪದ್ಧತಿಯ ಮೂಲಕ ಬೆಳೆದ ತರಕಾರಿಗಳ ಸೇವನೆ ಮಾಡುವುದುರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಹೇಳಿದರು.

ನಗರದ ಆಳಂದ ರಸ್ತೆಯ ಟೋಲ್‌ಗೇಟ್ ಸಮೀಪದ ರೈತ ಚಂದ್ರಶ್ಯಾ ಇಟಗಿ ಅವರ ತರಕಾರಿ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ‘ವಿಶ್ವ ತರಕಾರಿ ದಿನಾಚರಣೆ’ಯಲ್ಲಿ ತರಕಾರಿ ಬೆಳೆಗಾರ ರೈತ ಇಟಗಿಗೆ ಸತ್ಕರಿಸಿ, ನಂತರ ಮಾತನಾಡಿದ ಅವರು, ಬಹುತೇಕ ತರಕಾರಿಗಳು ಕಡಿಮೆ ಕೊಬ್ಬು, ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶ ಹೊಂದಿವೆ. ನಿಯಮಿತವಾಗಿ ಹಸಿರು ಸೊಪ್ಪು ಸೇರಿದಂತೆ ವಿವಿಧ ರೀತಿಯ ತರಕಾರಿಗಳ ಸೇವನೆಯಿಂದ ಜೀರ್ಣ ಶಕ್ತಿ ವೃದ್ಧಿ, ತೂಕ ನಿರ್ವಹಣೆ, ರೋಗ ನಿರೋಧಕ ಶಕ್ತಿಯ ವೃದ್ಧಿ, ಹೃದಯ, ಕಣ್ಣು, ಸ್ನಾಯುಗಳು, ಮೆದಳು, ಚರ್ಮ ಸೇರಿದಂತೆ ದೇಹದ ವಿವಿಧ ಭಾಗಗಳು ಸದೃಢವಾಗುತ್ತವೆ. ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಟೈಪ್-2ರ ಮಧುಮೇಹ, ಕ್ಯಾನ್ಸರ್ ಸೇರಿದಂತೆ ಮತ್ತಿತರ ಕಾಯಿಲೆಗಳಿಂದ ದೂರವಿರಬಹುದಾಗಿದೆ ಎಂದು ವೈದ್ಯಲೋಕ ತಿಳಿಸುತ್ತದೆ. ಆದ್ದರಿಂದ ನಿಯಮಿತವಾಗಿ ತರಕಾರಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೊಣ ಮತ್ತು ತರಕಾರಿ ಬೆಳೆಗಾರರಿಗೆ ಪ್ರೋತ್ಸಾಹಿಸೋಣ ಎಂದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ತರಕಾರಿ ಬೆಳೆಗಾರ ರೈತ ಚಂದ್ರಶ್ಯಾ ಇಟಗಿ, ನಾನು ವಿವಿಧ ತರಕಾರಿ, ಹೂಗಳು ಬೆಳೆಯುತ್ತೆನೆ. ಸಾವಯುವ ಗೊಬ್ಬರಕ್ಕೆ ಆದ್ಯತೆ ನೀಡುತ್ತೆನೆ. ನೈಜ ರೈತರನ್ನು ಗುರ್ತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗವು ಉತ್ತಮ ಕಾರ್ಯ ಮಾಡುತ್ತಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಹಾಗೂ ಕೃಷಿಕ ಸಮಾಜ ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಭೀಮಾಶಂಕರ ಚೌಡಾಪುರ, ರಮೇಶ ಗರಡಕರ್, ಸಂತೋಷ ಶಿಲ್ಡ್, ಅಭಿಶೇಕ ಗೌಳಿ, ಶಿವಲಿಂಗಪ್ಪ ನಿಗಸಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *