ಕಲಬುರಗಿ: ಯಾವುದೆ ರೀತಿಯ ಅಪಘಾತ, ದೇಹವು ಅನಾರೋಗ್ಯಕ್ಕೆ ತುತ್ತಾಗಿ ಶೂಚನೀಯ ಸ್ಥಿತಿಗೆ ತಲುಪುವ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವುದಕ್ಕಿಂತ ಮುಂಚಿತವಾಗಿ ಮಾಡುವ ಪ್ರಥಮ ಚಿಕಿತ್ಸೆ, ಅಂಬುಲೆನ್ಸನಲ್ಲಿಯೇ ಚಿಕಿತ್ಸೆ ನೀಡುತ್ತಾ ಅತ್ಯಂತ ವೇಗವಾಗಿ ಆಸ್ಪತ್ರೆಗೆ ತೆರಳಿ, ಅಲ್ಲಿನ ವೈದ್ಯರು ನೀಡುವ ತುರ್ತು ಚಿಕಿತ್ಸೆ ರೋಗಿಯ ಜೀವ ರಕ್ಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ಅಂತಾರಾಷ್ಟ್ರೀಯ ತುರ್ತು ವೈದ್ಯಕೀಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.
ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ‘ಅಪಘಾತ ತುರ್ತು ಸೇವಾ ಕೇಂದ್ರ’, ‘ರಾಷ್ಟ್ರೀಯ ಆರೋಗ್ಯ ಮಿಷನ್’, ‘ಟೆಲಿಮೆಡಿಸಿನ್ ಸೇವೆ’ಗಳಂತಹ ಸರ್ಕಾರದ ಉಪಕ್ರಮಗಳು ತುರ್ತು ಆರೈಕೆಯನ್ನು ಹೆಚ್ಚಿಸುವ ಗುರಿ ಹೊಂದಿವೆ. ತಮ್ಮ ಜೀವದ ಹಂಗನ್ನು ತೊರೆದು ಅತ್ಯಂತ ವೇಗವಾಗಿ ಅಂಬುಲೆನ್ಸ್ ಚಲಾಯಿಸಿ, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಮುಟ್ಟಿಸುವ ಚಾಲಕನ ನೆರವು ನೀಡುವ ಸಿಬ್ಬಂದಿ, ಚಿಕಿತ್ಸೆ ನೀಡುವ ವೈದ್ಯರ ಕಾರ್ಯ ಎಂದಿಗೂ ಮರೆಯುವಂತಿಲ್ಲ. ಆಸ್ಪತ್ರಗೆ ತೆರಳಿಯೇ ಚಿಕಿತ್ಸೆ ಪಡೆಯುತ್ತೆವೆಂಬ ಮನೋಭಾವನೆ ಜೀವಕ್ಕೆ ತೊಂದರೆ ಮಾಡುತ್ತದೆ. ಮುಂಚಿತವಾಗಿ ಪ್ರಥಮ ಚಿಕಿತ್ಸೆ ಮಾಡಿ, ನಂತರ ಆಸ್ಪತ್ರೆಗೆ ತೆರಳಿದರೆ ರೋಗಿಗೆ ಆತ್ಮವಿಶ್ವಾಸ ಬರುವುದರ ಜೊತೆಗೆ, ವೈದ್ಯರಿಗೂ ಕೂಡಾ ಚಿಕಿತ್ಸೆ ನೀಡಲು ಅನಕೂಲವಾಗುತ್ತದೆ. ಅನೇಕ ಪ್ರದೇಶಗಳ ಸಮೀಪದಲ್ಲಿ ಆಸ್ಪತ್ರೆ ಇಲ್ಲದಿರುವ ಸ್ಥಿತಿಯಲ್ಲಿ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಸಾಕಷ್ಟು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ಗಂಗಾಜ್ಯೋತಿ ಗಂಜಿ, ಸಿಬ್ಬಂದಿಗಳಾದ ನಾಗಮ್ಮ ಚಿಂಚೋಳಿ, ಸಿದ್ರಾಮ ಸೇರಿದಂತೆ ಅನೇಕರು ಇದ್ದರು.