ಕಾಳಗಿ: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಕಾಳಗಿ–ಕೊಡದೂರ ಮುಖ್ಯರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಮಂಗಲಗಿ ಗ್ರಾಮದ ದಶರಥ ಪೀರಪ್ಪ ಮಡಿವಾಳ (28) ಮೃತಪಟ್ಟ ಸವಾರನಾಗಿದ್ದು, ಅವರ ದೇಹ ಬೆಂಕಿಗೆ ಸುಟ್ಟು ಕರಕಲಾಗಿದೆ. ಸಾಸರಗಾಂವ ಗ್ರಾಮದ ಮಲ್ಲಪ್ಪ ಅಣ್ಣಪ್ಪ ಪೂಜಾರಿ (35), ಅವಿನಾಶ ಮಲ್ಲಪ್ಪ (2) ಗಾಯಗೊಂಡಿದ್ದಾರೆ.
ಮೃತ ದಶರಥ ಅವರ ಬೈಕ್ ಕಾಳಗಿಯಿಂದ ಮಂಗಲಗಿ ಕಡೆಗೆ ಹಾಗೂ ಮಲ್ಲಪ್ಪ ಅವರ ಬೈಕ್ ಕೊಡದೂರ ಕಡೆಯಿಂದ ಕಾಳಗಿ ಕಡೆಗೆ ಬರುತ್ತಿತ್ತು. ಮಾರ್ಗಮಧ್ಯೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ದಶರಥ ಸಾವನ್ನಪ್ಪಿದರೆ, ಇನ್ನೊಂದು ಬೈಕಿನಲ್ಲಿದ್ದ ಅವಿನಾಶ ಮತ್ತು ಮಲ್ಲಪ್ಪ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.