ನಮ್ಮ ನೆಲವೆ ನಮಗೆ ಪ್ರೇರಣೆ: ಮುಡುಬಿ ಗುಂಡೆರಾವ

ತಾಲೂಕು

ಚಿತ್ತಾಪುರ: ಕನ್ನಡ ಸಾರಸ್ವತ ಲೋಕಕ್ಕೆ ಪ್ರಥಮ ಕೃತಿ ‘ಕವಿರಾಜ ಮಾರ್ಗ’ ನೀಡಿದ ಹೆಗ್ಗಳಿಕೆ, ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ಸಾಮ್ರಾಜ್ಯ ಕಟ್ಟಿದ ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ, ಹೀಗೆ ಹತ್ತು ಹಲವಾರು ಸಾಧನೆಗೆಳಿಗೆ ಮುನ್ನುಡಿ ಬರೆದವರು ಕಲಬುರಗಿ ನೆಲದವರು ಎಂಬ ಅಭಿಮಾನ ನಮಗಿದೆ. ನಮ್ಮ ನೆಲವೆ ನಮಗೆ ಪ್ರೇರಣೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಪೇಠಶಿರೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-17ರಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಮ್ಮ ಜಿಲ್ಲೆಯ ಸ್ಮಾರಕಗಳು ಕರುನಾಡಿನ ಭವ್ಯ ಪರಂಪರೆಯನ್ನು ಸಾರುತ್ತವೆ. ಪೇಠಶಿರೂರ ಗ್ರಾಮದಲ್ಲಿ ಹಲವಾರು ಪ್ರಾಚೀನ ಸ್ಮಾರಕಗಳು, ಗತಕಾಲದ ಮಹತ್ವದ ಸಂಗತಿಗಳು ದೊರೆಯುತ್ತವೆ. ಪ್ರಾಚೀನ ಮಲ್ಲಿಕಾರ್ಜುನ ದೇವಾಲಯವು ತುಂಬಾ ಕಲಾತ್ಮಕವಾಗಿದೆ. ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅನಾವರಣಗೊಳಿಸುತ್ತದೆ. ಗ್ರಾಮದಲ್ಲಿ ವಿವಿಧ ದೇವಾಲಯಗಳು, ವೀರಗಲ್ಲು, ದೇವರುಗಳ ಶಿಲ್ಪಗಳು. ಕಲ್ಯಾಣಿ, ಅಷ್ಟ ದಿಕ್ಪಾಲಕರು, ಅಲಂಕಾರಿಕ ಕಂಬಗಳು, ಬೌದ್ಧ ಸ್ಮಾರಕಗಳು, ಶಾಸನ, ಪಳುವಳಿಕೆಗಳು ಮುಂತಾದವರ ನಾಡು ಮತ್ತು ರಾಷ್ಟ್ರದ ಇತಿಹಾಸ ಸಾರುತ್ತವೆ ಎಂದರು.

ಗ್ರಾಮದಲ್ಲಿ ದೊರೆತ ಕ್ರಿ.ಶ 1117 ಶಾಸನವು ಕಲ್ಯಾಣ ಚಾಲುಕ್ಯ ದೊರೆ 6ನೇಯ ವಿಕ್ರಮಾದಿತ್ಯನು ದೇವಾಲಯಕ್ಕೆ ಭೂದತ್ತಿ ದಾನ ಮಾಡಿದ ಉಲ್ಲೇಖ ಬರುತ್ತದೆ. ಇದರಿಂದ ನಾಡ ದೊರೆಗಳ ಪರೋಪಕಾರತೆ, ಉದಾರತೆಯು ಇತಿಹಾಸದಿಂದ ತಿಳಿದುಬರುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ನಮ್ಮ ಬಳಗದ ವತಿಯಿಂದ ಕಳೆದ ಒಂದು ವರ್ಷದಿಂದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೆವೆ. ಸ್ಥಳಿಯ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ನೆಲದ ಮಹಿಮೆಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ. ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಪೇಠಶಿರೂರ ಗ್ರಾಮವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಾಳಗಿಯ ಸಾವಿರ ಹಳ್ಳಿಗಳ (ಮನ್ನೆದಡಿ ಸಾಸಿರ ನಾಡಿನ) ವ್ಯಾಪ್ತಿಗೆ ಸೇರಿತ್ತು. ಈ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕನ್ನಡ ಸಂಸ್ಕೃತಿ ವಿಜೃಂಭಿಸಿವೆ. 6ನೇ ವಿಕ್ರಾಮಾದಿತ್ಯ ಅರಸ ಈ ದೇವಾಲಯಕ್ಕೆ ಭೂದಾನ ಮಾಡಿದ ದತ್ತಿ ಶಾಸನವು ಕಲ್ಯಾಣ ಚಾಲುಕ್ಯರ ಸಮಾಜಮುಖಿ ಕಲ್ಯಾಣ ಕಾರ್ಯಗಳ ಇತಿಹಾಸ ಸಾರುತ್ತಿವೆ. ಇಂದಿನ ಪೀಳಿಗೆ ಐತಿಹಾಸಿಕ ಪ್ರಜ್ಞೆ ಮೂಡಿಸುವ ಕಾರ್ಯ ಮಾಡಬೇಕು.

ಮುಡುಬಿ ಗುಂಡೆರಾವ
ಸಂಶೋಧಕ-ಸಾಹಿತಿ, ಸೇಡಂ

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಗ್ರಾಮದ ಮುಖಂಡ ರೇವಣಸಿದ್ದಪ್ಪ ಸುಗೂರ್, ದೇವಸ್ಥಾನ ಅರ್ಚಕ ಯಲ್ಲಾಲಿಂಗ ಪೂಜಾರಿ, ಗ್ರಾಮಸ್ಥರಾದ ವೈಜನಾಥ, ಸಿದ್ದಲಿಂಗ ಪೂಜಾರಿ, ಶರಣು ಕುಂಬಾರ, ನಾಗಣ್ಣ ಪೂಜಾರಿ, ಮೌನೇಶ, ಸುಭಾಶ್ಚಂದ್ರ ಪಿ, ಅಯ್ಯಣ್ಣ, ರವಿಕುಮಾರ, ಗುರಣ್ಣ ಕುಂಬಾರ, ಶುಭಾಷ ಪೂಜಾರಿ, ರೇವಣಸಿದ್ದಪ್ಪ ಕುಂಬಾರ, ಅನೀಲ, ಸಾಬಣ್ಣ, ಅಮೃತ್, ರವಿ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *