ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ದೊರೆಯುವ ಬಹುತೇಕ ಶಾಸನ, ಸ್ಮಾರಕಗಳು ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ ಕಲಾ ವೈಭವ, ದಾನ, ದತ್ತಿ, ಪರೋಪಕಾರತೆ ಇತಿಹಾಸವನ್ನು ಸಾರುತ್ತವೆ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಜಿಲ್ಲೆಯ ಹೊನಗುಂಟಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ಬಸವೇಶ್ವರ ಸೇವಾ ಬಳಗ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-36ದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶಹಾಬಾದ ತಾಲೂಕಿನ ಭಂಕೂರ, ಮಾಲಗತ್ತಿ, ಮರತೂರ, ದೇವರ ತೆಗನೂರು, ಹೊನಗುಂಟಿ ಗ್ರಾಮಗಳಲ್ಲಿ ಐತಿಹಾಸಿಕ ಪ್ರಾಚೀನ ಕುರುಹುಗಳು, ಸ್ಮಾರಕಗಳು ದೊರೆತಿವೆ. ಕನ್ನಡ ನಾಡು, ನುಡಿ ಸಂಸ್ಕೃತಿಗೆ ಶಹಬಾದ ಪರಿಸರದ ಗ್ರಾಮಗಳು ನೀಡಿರುವ ಕೊಡುಗೆ ಅಪಾರವಾಗಿದೆ. ಶೈವ, ವೈಷ್ಣವ, ಜೈನ, ಬೌದ್ದ ಧರ್ಮೀಯರು ಬಾಳಿ ಬೆಳಗಿದ ಸಾಮರಸ್ಯದ ನೆಲವೀಡಾಗಿದೆ. ವಿಶ್ವ ಪ್ರಸಿದ್ದ ಶಹಾಬಾದ ಕಲ್ಲುಗಳಿಗೆ ಇಂದಿಗೂ ಭಾರಿ ಬೇಡಿಕೆ ಇದೆ. ನ್ಯಾಯ ಶಾಸ್ತ್ರಕ್ಕೆ ಮರತೂರಿನ ವಿಜ್ಞಾನೇಶ್ವರರು ಮಿತಾಕ್ಷರ ಗ್ರಂಥ ನೀಡಿದ್ದು ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ಭಂಕೂರು ಮತ್ತು ಮಾಲಗತ್ತಿಯಲ್ಲಿನ ಜೈನ ಬಸದಿಗಳು ಕರುನಾಡಿನ ಇತಿಹಾಸ ಸಾರುತ್ತವೆ ಎಂದರು.
ಶಹಾಬಾದ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿ, ನಮ್ಮ ಗ್ರಾಮಗಳ ಇತಿಹಾಸವು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಅಭಿಮಾನ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಬಳಗದ ಅಧ್ಯಕ್ಷ ಪ್ರೊ. ಎಚ್.ಬಿ ಪಾಟೀಲ ಮಾತನಾಡಿ, ಶಹಾಬಾದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಐತಿಹಾಸಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಇತಿಹಾಸ ಅರಿವು ಮೂಡಿಸಲಾಗಿದೆ ಎಂದರು.
ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ ಮಾತನಾಡಿ, ನಮ್ಮ ಊರು, ನಮ್ಮ ತಾಲೂಕು ಮತ್ತು ನಮ್ಮ ಜಿಲ್ಲೆಯ ಪವಿತ್ರ ಸ್ಥಳಗಳ ಸ್ಥಳನಾಮ ಅರಿತುಕೊಳ್ಳುವುದು ಜರೂರಿನ ಕೆಲಸವಾಗಿದೆ ಎಂದರು.
ಕನ್ನಡ ನಾಡಿಗೆ ಶಹಾಬಾದ ತಾಲೂಕಿನ ಕೊಡುಗೆ ಅಪಾರವಾಗಿದೆ, ಹೊನಗುಂಟಿಯ ಪವಿತ್ರ ಕ್ಷೇತ್ರಗಳು, ಮರತೂರಿನಲ್ಲಿ ನೆಲೆ ನಿಂತ ವಿಜ್ಞಾನೇಶ್ವರರು ಮಿತಾಕ್ಷರ ಗ್ರಂಥ ಬರೆದು ಭಾರತ ಕಾನೂನು ಶಾಸ್ತçಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು, ಬಂಕೂರು ಮತ್ತು ಮಾಲಗತ್ತಿಯ ಜೈನ ಬಸಿದಿಗಳು ನಾಡಿನ ಇತಿಹಾಸದ ಪುಟ ತೆರೆಯುತ್ತವೆ.
ಮುಡುಬಿ ಗುಂಡೇರಾವ
ಸಂಶೋಧಕ- ಸಾಹಿತಿಗಳು
ಈ ಸಂದರ್ಭದಲ್ಲಿ ಅರ್ಚಕ ನಾಗಪ್ಪ ಪೂಜಾರಿ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಮಹಾದೇವಪ್ಪ ಬಿರಾದಾರ, ವಿರೂಪಾಕ್ಷಪ್ಪ ಗದ್ದುಗಿ, ಲಕ್ಕಪ್ಪ, ಬಾಬು ಕಾವಲಗಿ ಸೇರಿದಂತೆ ಮುಂತಾದವರಿದ್ದರು.