ಕಲಬುರಗಿ: ಒಂಬತ್ತು ತಿಂಗಳು ಹೊತ್ತು, ಹೆತ್ತ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಿನಲ್ಲಿ ಯಾರು ಇಲ್ಲ. ವರ್ಣಿಸಲು ಅಸಾಧ್ಯವಾದ, ಅನುಪಮ ವ್ಯಕ್ತಿ ತಾಯಿಯಾಗಿದ್ದಾಳೆ. ಇಡೀ ತನ್ನ ಜೀವನ ಸವೆಸಿ, ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯನ್ನು ಪೂಜ್ಯನೀಯ ಸ್ಥಾನವನ್ನು ನೀಡಿ, ಆರೈಕೆ ಮಾಡಿ, ಗೌರವಿಸಬೇಕಾದದ್ದು ಪ್ರಸ್ತುತ ದಿನಗಳಲ್ಲಿ ಅತಿ ಅವಶ್ಯಕವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಹೊರ ವಲಯದ ರಾಣೆಸ್ಪಿರ್ ದರ್ಗಾ ರಸ್ತೆಯಲ್ಲಿನ ನೆಮ್ಮದಿ ವೃದ್ಧಾಶ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ವಿಶ್ವ ತಾಯಂದಿರ ದಿನಾಚರಣೆ’ಯಲ್ಲಿ ಹಿರಿಯ ತಾಯಂದಿರೆಗೆ ಗೌರವಿಸಿ ಮಾತನಾಡಿದ ಅವರು, ‘ತಾಯಿ’ ಎನ್ನುವುದು ಹೆಣ್ಣಿನ ಕುರಿತು ಹೇಳುವುದಲ್ಲ. ಭೂಮಿ, ದೇಶ, ನದಿ, ಪರಿಸರಕ್ಕೆ ತಾಯಿಯ ಸ್ವರೂಪದ ಹೆಸರನ್ನಿಟ್ಟು ಕರೆಯುವುದು ಆಕೆಯ ಮಹತ್ವವನ್ನು ಸಾರುತ್ತದೆ. ತಾಯಿಯು ಪ್ರೀತಿ, ಕರುಣೆ, ಮಾನವೀಯತೆ ಉಳಿಸಿ, ಬೆಳೆಸುವ ಮಹಾನ ವ್ಯಕ್ತಿಯಾಗಿದ್ದಾಳೆ. ಎಲ್ಲರನ್ನು ಒಂದೂಗೂಡಿಸುವ ಶಕ್ತಿ ಆಕೆಯಲ್ಲಿದೆ. ‘ತಾಯಿಯೇ ಮೊದಲು ಗುರು’ ಎಂಬ ಮಾತು ಮಕ್ಕಳನ್ನು, ಮಹಾನ ವ್ಯಕ್ತಿಯನ್ನಾಗಿಸುವಲ್ಲಿ ಆಕೆಯ ಔಚಿತ್ಯವನ್ನು ತೋರಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಹಿರಿಯ ತಾಯಂದಿರಾದ ಚನ್ನಮ್ಮ, ಶಾಂತಾಬಾಯಿ ಬಶೆಟ್ಟಿ, ಶಾಂತಾಬಾಯಿ ಕೊಳ್ಳುರ, ಭಾಗಿರತಿ, ಇಂದುಬಾಯಿ, ಲಕ್ಷ್ಮಿಬಾಯಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಶಿಕ್ಷಕ ಮಹಾಂತೇಶ ಬಿ ಬಿರಾದಾರ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ವೃದ್ಧಾಶ್ರಮದ ಶಶಿಕಲಾ, ಕಮಲಾಬಾಯಿ, ಮಾಲತಿಬಾಯಿ, ಸರುಬಾಯಿ, ರೇವಮ್ಮ, ನಿಂಗಮ್ಮ ಸೇರಿದಂತೆ ಅನೇಕರು ಇದ್ದರು.