ಅದ್ದೂರಿ ಜಾತ್ರಾ ಮಹೋತ್ಸವ ಆಚರಣೆಗೆ ಟ್ರಸ್ಟ್ ನಿರ್ಧಾರ: ಚಂದ್ರಶೇಖರ ಅವಂಟಿ

ಸುದ್ದಿ ಸಂಗ್ರಹ

ಚಿತ್ತಾಪುರ: ಆ.19 ರಂದು ತಾಲೂಕಿನ ದಂಡಗುಂಡ ಗ್ರಾಮದ ಬಸವಣ್ಣ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಹೇಳಿದರು.

ತಾಲೂಕಿನ ದಂಡಗುಂಡ ಬಸವಣ್ಣ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರಾವಣ ಮಾಸದ ಪವಿತ್ರವಾದ ದಿನ ನಡುವಿನ ಸೋಮವಾರ ದಿವಸ ಪ್ರತಿ ವರ್ಷ ದಂಡಗುಂಡ ಬಸವಣ್ಣನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ ಎಂದರು.

ಕಳೆದ ವಾರ ಭಾನುವಾರ ಅಮವ್ಯಾಸೆಯಂದು ಇಲ್ಲಿನ ದೇವಸ್ಥಾನದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಸೇರಿ ದರ್ಶನ ಪಡೆದರು. ಇದರಿಂದಾಗಿ ಜಾತ್ರೆಗೆ 2 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ಸಾಧ್ಯತೆ ಇದೆ. ಆದ್ದರಿಂದ ಜಾತ್ರೆ ಸುಗಮ ನಡೆಯಲು ಸೂಕ್ತ ಬಂದೋಬಸ್ತ ಅಗತ್ಯವಿದೆ ಎಂದರು.

ಟ್ರಸ್ಟ್ ವತಿಯಿಂದ ಅದ್ದೂರಿ ಜಾತ್ರೆಗೆ ಎಲ್ಲಾ ರೀತಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಯಾವುದೇ ರೀತಿಯ ಊಹಾಪೋಹಗಳಿಗೆ ಯಾರು ಕಿವಿ ಕೊಡಬೇಡಿ. ಜಾತ್ರೆಯು ಕುಂಭ, ಕಳಸ, ಪಲ್ಲಕಿ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಂಪ್ರದಾಯದ ಪ್ರಕಾರ ಪದ್ದತಿಯಂತೆ ಅಚ್ಚುಕಟ್ಟಾಗಿ ನಡೆಯಲಿದೆ. ಈಗಾಗಲೇ ಬಹುತೇಕ ಜಾತ್ರೆಯ ಕಾರ್ಯಗಳನ್ನು ಮುಗಿಯುವ ಹಂತದಲ್ಲಿದೆ. ಜಾತ್ರಾ ಮಹೋತ್ಸವ ಯಶಸ್ವಿ ಮಾಡಲು ಕೈಜೋಡಿಸಿ ಎಂದು ಮನವಿ ಮಾಡಿದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾತನಾಡಿ, ತಾಲೂಕಿನ ದಂಡಗುಂಡ ಗ್ರಾಮದ ಬಸವಣ್ಣ ದೇವಸ್ಥಾನದ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ಆಚರಣೆಗೆ ಜನರ ಸಹಕಾರ ಅಗತ್ಯವಿದೆ ಎಂದರು.

ನೂರಾರು ವರ್ಷಗಳಿಂದ ಈ ಜಾತ್ರೆ ಅದ್ಧೂರಿಯಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆ ಅವಕಾಶ ನೀಡದೇ ಈ ಬಾರಿಯು ಜಾತ್ರೆಯನ್ನು ಯಶಸ್ವಿಗೋಳಿಸೋಣ ಎಂದರು.

ಜಾತ್ರೆಗೆ ರಾಜ್ಯ ಸೇರಿದಂತೆ ದೂರದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ಮುಖ್ಯವಾಗಿ ಸಮಸ್ಯೆಯಾಗುವುದು ಪಾರ್ಕಿಂಗ್ ವಿಚಾರ. ಸುಮಾರು 4 – 5 ಕಿ.ಮಿ ವರಗೆ ಟ್ರಾಫಿಕ್ ಇರುತ್ತೆ, ಸುಗಮ ಸಂಚಾರಕ್ಕೆ ವಾಹನಗಳಿಗೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವದು. ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನಗಳು ಪಾರ್ಕಿಂಗ್ ಮಾಡಬೇಕು. ಸಿಕ್ಕ ಸಿಕ್ಕಲೇ ವಾಹನಗಳನ್ನು ನಿಲ್ಲಿಸಿದರೇ, ಸುಗಮ ಸಂಚಾರಕ್ಕೆ ತೊಂದರೆಯಾಗುವದು. ಅದಕ್ಕೆ ಯಾರು ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡಬಾರದು. ಬೇಕಾಬಿಟ್ಟಿಯಾಗಿ ನಿಲ್ಲಿಸಿದರೇ ದಂಡ ವಿಧಿಸಲಾಗುವದು ಎಂದು ಎಚ್ಚರ ನೀಡಿದರು.

ದೇವಸ್ಥಾನದ ದುರಸ್ತಿ ಕಾರ್ಯ ನಡೆದಿದೆ. ದೇವಸ್ಥಾನ ಆಡಳಿತ ಮಂಡಳಿಯವರು ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾದ ಸರದಿಯ ಸಾಲು ವ್ಯವಸ್ಥೆ ಮಾಡಿದರೇ ಅಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗುವದು ಎಂದರು.

ದೂರದ ಜಿಲ್ಲೆ, ಬೇರೆ ರಾಜ್ಯಗಳಿಂದ ಬಂದ ಭಕ್ತರನ್ನು ಇಲ್ಲಿನ ಜನರು ಪ್ರೀತಿ ವಿಶ್ವಾಸದಿಂದ ನೋಡಿ ನೀರು, ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು. ಗ್ರಾಮ ಪಂಚಾಯತಿಯವರು ಸ್ವಚ್ಚತೆಯತ್ತ ಗಮನ ಹರಿಸಬೇಕು. ಉತ್ತಮ ಕಂಡಿಷನ್ ಇರುವ ಬಸ್ಸಗಳು ಜಾತ್ರೆಗೆ ಬಿಡಬೇಕು. ಭಕ್ತರಿಗೆ ಯಾವದೆ ರೀತಿಯಲ್ಲಿ ತೊಂದರೆಯಾಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಲಾಗವದು. ಟ್ರಸ್ಟ್ ವತಿಯಿಂದ ಅಥವಾ ಗ್ರಾಮಸ್ಥರ ವತಿಯಿಂದ ಕೆಲವರನ್ನು ನಮಗೆ ವಾಲೆಂರ್ಟಸ್ ಆಗಿ ನೀಡಿದರೇ, ಅವರಿಗೆ ಗುರುತಿನ ಚೀಟಿ, ಡ್ರೆಸ್ ಕೋಡ್ ನೀಡಿದರೇ ನಮಗೆ ಸಾಕಷ್ಟು ಅನುಕೂಲವಾಗುತ್ತದೆ. ಎಷ್ಟೆ ಸಂಖ್ಯೆಯಲ್ಲಿ ಜನ ಬಂದರೂ ನಾವು ಅವರಿಗೆ ಭದ್ರತೆ ಮತ್ತು ಅನಾನುಕೂಲವಾಗದಂತೆ ನೋಡಿಕೋಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಪೊಲೀಸ್ ಇಲಾಖೆ ನಿಮ್ಮ ಜೊತೆ ಇದೆ. ಜಾತ್ರೆ ಯಶಸ್ವಿ ಮಾಡೋಣ ಎಂದರು.

ಸುಗಮ ಸಂಚಾರಕ್ಕೆ ಒನ್ ವೇ ಮಾಡಿದರೆ ಮಾತ್ರ ಪರಿಹಾರ. ಏಕ ಮುಖ ರಸ್ತೆ ಮಾಡಿದಾಗ ಮಾತ್ರ ವಾಹನಗಳ ಸುಗಮವಾಗಿ ಸಂಚಾರ ಅನುಕೂಲವಾಗುತ್ತದೆ. ದಂಡಗುಂಡ ಬಸವೇಶ್ವರ ಜಾತ್ರೆಗೆ ರಾಜ್ಯ ಮತ್ತು ಅನ್ಯರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬರುತ್ತವೆ. ವಾಹನಗಳಿಗೆ ಒಂದು ಕಡೆಯಿಂದ ಬರುವದು, ಇನ್ನೊಂದು ಕಡೆಯಿಂದ ಹೋಗುವದು ಸೂಕ್ತ. ದೇವಸ್ಥಾನಕ್ಕೆ ಬರುವ ವಾಹನಗಳು ಅಳ್ಳೋಳಿ ಮಾರ್ಗದಿಂದ ದೇವಸ್ಥಾನಕ್ಕೆ ಬರಬೇಕು. ವಾಪಸ್ಸು ಹೋಗುವಾಗ ಸಂಕನೂರ ಅಥವಾ ಯಾಗಾಪುರ ಮಾರ್ಗದ ಮೂಲಕ ವಾಹನಗಳು ಸಂಚರಿಸಿದರೇ ಮಾತ್ರ ಸುಗಮ ಸಂಚಾರಕ್ಕೆ ಮಾಡಬಹುದು. ಇದರಿಂದ ಸುಗಮ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಈ ಕುರಿತು ಚರ್ಚಿಸಿ ನಿರ್ಧಾರ ಮಾಡಲಾಗುವದು ಎಂದರು.

ಟ್ರಸ್ಟ್ ಸಮಿತಿ ಉಪಾಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಮಳೆ ಬಂದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾಡಪತ್ರಿ ಹಾಕುವ ವ್ಯವಸ್ಥೆ ಮಾಡಲಾಗುವದು ಎಂದರು.

ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್’ಐ ಶ್ರೀಶೈಲ್ ಅಂಬಾಟಿ ಮಾತನಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಸದಸ್ಯರಾದ ಭೀಮರಾಯಗೌಡ ಚಾಮನೂರ್, ಬಸವರಾಜಗೌಡ ಭಾಸರೆಡ್ಡಿ, ಮಹಾಂತಗೌಡ ಮಾಲಿ ಪಾಟೀಲ್ ದಂಡಗುಂಡ, ಪ್ರಮುಖರಾದ ಗುರುರಾಜ್, ಕಲ್ಯಾಣಕುಮಾರ, ಕೆಎಸ್‌ಆರ್‌ಟಿಸಿಯ ಬಸವರಾಜ, ಅಗ್ನಿಶಾಮಕ್ ದಳದ ಶಿವರಾಜ್, ಬಸವರಾಜ್, ಶಿವರಾಜಗೌಡ ಸೇರಿದಂತೆ ಇತರರಿದ್ದರು.

ಬಸ್ಸುಗೌಡ ಮಾಲಿ ಪಾಟೀಲ್ ಸ್ವಾಗತಿಸಿ, ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *