ಚೆನ್ನೈ: ತಾಯಿಯೇ ಮಗುವನ್ನು ಕೊಂದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿರೋದಾಗಿ ಮಹಿಳೆ ಹೇಳಿಕೆ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.
ಮಗುವನ್ನು ಕೊಂದ ಮಹಿಳೆಯನ್ನು ಬೆನಿತಾ ಜಯ ಅನ್ನಲ್ (20) ಎಂದು ಗುರುತಿಸಲಾಗಿದೆ. ಬೆನಿತಾ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರ್ ಕಟ್ಟುವಿಲೈ ಪ್ರದೇಶದ ನಿವಾಸಿ. ಒಂದು ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು ಪ್ರದೇಶದ ಕಾರ್ತಿಕ್ (21) ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಬೆನಿತಾ-ಕಾರ್ತಿಕ್ ಜೋಡಿಗೆ 40 ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗು ಜನಿಸಿದ್ದಳು. ಈಗ ಆ ಮಗುವಿನ ಪ್ರಾಣವನ್ನೇ ತಾಯಿ ತೆಗೆದಿದ್ದಾಳೆ.
ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಲೆ
ಮದುವೆ ಬಳಿಕ ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ ಕಾರ್ತಿಕ್, ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಪತ್ನಿಯೇ ಮಗುವನ್ನು ಕೊಲೆ ಮಾಡಿರುವ ವಿಷಯ ಕೇಳಿ ಗಂಡ ಆಘಾತಕ್ಕೊಳಗಾಗಿದ್ದಾರೆ. ಕ್ರೂರ ತಾಯಿ ಮಗುವಿನ ಬಾಯಲ್ಲಿ ಟಿಶ್ಯೂ ಪೇಪರ್ ತುರುಕಿ ಕೊಲೆ ಮಾಡಿದ್ದಾಳೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 9ರಂದು ಕಾರ್ತಿಕ್ 9 ರಂದು ಎಂದಿನಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿದ್ದರು. ಮನೆಗೆ ಬಂದು ಮಗುವನ್ನು ಎತ್ತಿಕೊಂಡಾಗ ಅದರಲ್ಲಿ ಯಾವುದೆ ಚಲನೆ ಇರಲಿಲ್ಲ. ಉಸಿರಾಟ ನಿಂತಿದ್ದರಿಂದ ಗಾಬರಿಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರಿಶೀಲಿಸಿದ ವೈದ್ಯರು, ಕಂದಮ್ಮ ಸಾವನ್ನಪ್ಪಿರೊದು ಖಚಿತಪಡಿಸಿದ್ದಾರೆ.
ಮಗುವಿನ ಹಣೆ ಮೇಲೆ ಗಾಯ
ಮಗುವಿನ ಹಣೆಯ ಮೇಲೆ ಗಾಯವಾಗಿತ್ತು. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ಮಗು ಹಾಲು ಕುಡಿಯುವಾಗ ಕೆಳಗೆ ಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದಳು. ಇದರಿಂದ ಆಘಾತಕ್ಕೊಳಗಾದ ಕಾರ್ತಿಕ್ ಮಗುವನ್ನು ಎತ್ತಿಕೊಂಡು ಕರುಂಗಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿರು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಹೇಳಿದಾಗ ಕಾರ್ತಿಕ್ ಕುಸಿದಿದ್ದರು.
ಶವಪರೀಕ್ಷೆ ವರದಿ ನೋಡಿ ಪೊಲೀಸರು ಶಾಕ್
ಕಾರ್ತಿಕ್ ಈ ಸಂಬಂಧ ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ತಿಕ್ ದಾಖಲಿಸಿದ ದೂರಿನ ಮೇರೆಗೆ ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸರಿಪಲ್ಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಶವಪರೀಕ್ಷೆ ವರದಿ ನೋಡಿ ಪೊಲೀಸರು ಒಂದು ಕ್ಷಣ ಆಘಾತಕ್ಕೊಳಗಾದರು. ಮಗುವನ್ನು ಕೊಲೆ ಮಾಡಲಾಗಿರೋದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗಗೊಂಡಿತ್ತು.
ಗಂಡನ ಪ್ರೀತಿ ಕಡಿಮೆಯಾಗಲು ಮಗು ಕಾರಣ
ಮರಣೋತ್ತರ ಪರೀಕ್ಷೆ ವರದಿ ಬಳಿಕ ಪೊಲೀಸರು ಮಗುವಿನ ತಾಯಿಯನ್ನು ಕೂಲಂಕಷ ವಿಚಾರಣೆ ನಡೆಸಿದರು. ನಂತರ ಮಗುವನ್ನು ಕೊಂದಿದ್ದಾಗಿ ಅವಳು ಒಪ್ಪಿಕೊಂಡಳು. ಅಲ್ಲದೆ ನನ್ನ ಮಗು ಹುಟ್ಟಿ 40 ದಿನಗಳು ಕಳೆದಿವೆ. ಅಂದಿನಿಂದ ನನ್ನ ಗಂಡನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ. ಇದರಿಂದಾಗಿ ಮನೆಯಲ್ಲಿ ಸಮಸ್ಯೆಗಳಿದ್ದವು. ಘಟನೆ ನಡೆದ ದಿನ ಕೋಪದಿಂದ ಮಗುವಿನ ಬಾಯಿಯಲ್ಲಿ ಕಾಗದವನ್ನು ತುರುಕಿದ್ದಳು. ಗಂಡನ ಪ್ರೀತಿ ಕಡಿಮೆಯಾಗಲು ಮಗುವೇ ಕಾರಣ ಎಂದು ಬೆನಿತಾ ಹೇಳಿದ್ದಳು. ಇದೀಗ ಬೆನಿತಾಳನ್ನು ಬಂಧಿಸಿ ಕತ್ತಲಕೋಣೆಗೆ ಕಳುಹಿಸಲಾಗಿದೆ.