ದಂಡಗುಂಡ ಬಸವಣ್ಣ ಮಹಾರಾಜ್ ಕಿ ಜೈ

ಸುದ್ದಿ ಸಂಗ್ರಹ

ಚಿತ್ತಾಪುರ: ಶ್ರಾವಣ ಮಾಸದ ನಡುವಿನ ಸೋಮವಾರ ನಾಡಿನ ಜನತೆಗೆ ವಿಶೇಷವಾಗಿದ್ದು, ತಾಲೂಕಿನ ಸುಪ್ರಸಿದ್ದ ದಂಡಗುಂಡ ಬಸವಣ್ಣನ ದೇವಸ್ಥಾನದಲ್ಲಿ ಭವ್ಯ ರಥೋತ್ಸವ ಜನರ ಜಯಘೋಷಗಳೊಂದಿಗೆ ಸಂಜೆ ಜರುಗಿತು.

ಗುಡ್ಡಗಾಡುಗಳ ಮಧ್ಯೆ ಇರುವ ಈ ದೇವಸ್ಥಾನದ ಎದುರುಗಡೆ ಸೋಮವಾರ ನಡೆದ ರಥೋತ್ಸವದಲ್ಲಿ ದಂಡಗುಂಡ ಬಸವಣ್ಣ ಮಹಾರಾಜಕೀ ಜೈ ಎಂಬ ಘೋಷಣೆಯೊಂದಿಗೆ ಆರಂಭಗೊಂಡಿತು.
ರಥೋತ್ಸವದಲ್ಲಿ ಭಕ್ತರು ಬಾಳೆಹಣ್ಣು, ಉತ್ತತ್ತಿ(ಕಾರಿಕ)ಗಳಿಂದ ರಥದ ಮೇಲೆ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಇನ್ನೊಂದೆಡೆ ಎಸೆದ ಬಾಳೆಹಣ್ಣುಗಳನ್ನು ಕೈಯಲ್ಲಿ ಹಿಡಿಯಲು ಪ್ರಯತ್ನಿಸಿ ಅದುವೇ ಪ್ರಸಾದವೆಂದು ಭಕ್ತರು ಸ್ವೀಕರಿಸುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆದವು.

ದೇವಸ್ಥಾನದಿಂದ 3 ಕಿ.ಮಿ ದೂರದವರೆಗೆ ಭಕ್ತರ ಜನಸ್ತೋಮದಿಂದಾಗಿ ದೇವರ ದರ್ಶನ ಪಡೆಯಲು ಹಾಗೂ ರಥೋತ್ಸವ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

ಬಾಜಾ ಭಜಂತ್ರಿ, ಡೊಳ್ಳು, ಕುಣಿತ, ಪುರವಂತರ ಆಟಗಳು, ಬಣ್ಣಬಣ್ಣದ ಕೊಡೆಗಳು, ಧರ್ಮದ ದ್ವಜಗಳು, ಉಚ್ಛಾಯಿ, ಸುಮಂಗಲಿಯರಿಂದ ಆರತಿಗಳು, ಕುಂಭ, ಭಜನೆ, ಗೀಗೀ ಪದಗಳು, ಜಾನಪದ ಕಲಾವಿದರಿಂದ ಭಜನೆ ಸೇರಿದಂತೆ ವಿಶೇಷ ಹಾಡುಗಳು ಜನಮನ ಸೆಳೆದವು.

ಕುಂಭ, ಕಳಸ, ಪಲ್ಲಕ್ಕಿ ಮೆರವಣಗೆ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪಿತು.

ದೇವಸ್ಥಾನ ಸುತ್ತಲು ದೀಪಾಲಂಕಾರ ಕಂಗೊಳಿಸುತ್ತಿತ್ತು. ಹಣತೆ ದೀಪಗಳ ಸಾಲು ರಾರಾಜಿಸುತ್ತಿದ್ದವು. ಬೆಳಗ್ಗೆಯಿಂದಲೇ ದರ್ಶನ ಪಡೆಯಲು ಪುರುಷರು, ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
100 ಕಿ.ಮೀ ಕ್ಕಿಂತ ಹೆಚ್ಚು ದೂರದ ಪಟ್ಟಣ ಹಾಗೂ ಗ್ರಾಮಗಳಿಂದ ರಾತ್ರಿವರೆಗೂ ಅಪಾರ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ದೇವಸ್ಥಾನಕ್ಕೆ ನೈವೇದ್ಯ ಸಲ್ಲಿಸುತ್ತಿರುವದು ಇಲ್ಲಿಯ ವಿಶೇಷತೆ ಎದ್ದು ಕಾಣುತ್ತಿತ್ತು. ಭಕ್ತರಿಗಾಗಿ ದಾರಿಯೂದ್ದಕ್ಕೂ ವಿವಿಧ ಸಂಘ, ಸಂಸ್ಥೆ ಭಕ್ತರಿಂದ ಪ್ರಸಾದ ವ್ಯವಸ್ಥೆ ಮಾಡಿರುವದು ಗಮನ ಸೆಳೆಯಿತು.

ಗಂಗಸ್ಥಳ, ಕತೃ ಗದ್ದುಗೆಗೆ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಭಜನೆಗಳು ಜರುಗಿದವು.
ಬೆಳಗ್ಗೆಯಿಂದ ಸಂಜೆವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ಉದ್ಯಮಿ ಚಂದು ಪಾಟೀಲ್, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಚಂದ್ರಶೇಖರ ಅವಂಟಿ, ಭೀಮರಾಯಗೌಡ ಚಾಮನೂರ, ಭೀಮಣ್ಣ ಸಾಲಿ, ರಾಜಶೇಖರ ಪಾಟೀಲ ಸಂಕನೂರ, ಬಸವರಾಜಗೌಡ ಭಾಸರೆಡ್ಡಿ, ಮಹಾಂತಗೌಡ ಪಾಟೀಲ, ಅಜಯರೆಡ್ಡಿಗೌಡ ಸಂಕನೂರ, ಹಣಮಂತ ಸಂಕನೂರ, ನಿಂಗಣ್ಣಗೌಡ ಭೀಮನಳ್ಳಿ, ಪ್ರಸಾದ ಅವಂಟಿ, ವಿಶ್ವರಾಧ್ಯಗೌಡ ಕರದಾಳ, ಶಶಿಕಾಂತ ಪಾಟೀಲ್ ಬೆಳಗುಂಪಾ ಹಾಗೂ ಕರ್ನಾಟಕ ಸೇರಿದಂತೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಂದ ಆಪಾರ ಭಕ್ತರು ಭಾಗವಹಿಸಿ ದರ್ಶನ ಪಡೆದರು.

ಅಳ್ಳೊಳ್ಳಿಯ 10ನೇ ತರಗತಿ ವಿಜ್ಞೇಶ ನನ್ನ ತಂದೆ ಕುಡಿತ ಬಿಡಬೇಕು. ನನಗೆ ಸರ್ಕಾರಿ ನೌಕರಿ ಸಿಗಬೇಕು ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿನ ಮೇಲೆ ಎಸೆದು ಪ್ರಾರ್ಥಿಸಿದ್ದಾನೆ.

ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡೆ, ಪಿಎಸ್ ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ, ತಿರುಮಲೇಶ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಜಾತ್ರಾಮಹೋತ್ಸವ ಶಾಂತಿ ಯುತವಾಗಿ ಜರುಗಲು
ಡಿವೈಎಸ್‌ಪಿ – 1, ಸಿಪಿಐ – 2, ಪಿಎಸ್‌ಐ – 5 ಎಎಸ್‌ಐ – 8 ಪೊಲೀಸರು – 45, ಗೃಹ ರಕ್ಷಕ ದಳ ಸಿಬ್ಬಂದಿ – 35, ಡಿಆರ್ ವಾಹನ – 2, ಪೊಲೀಸ್ ಠಾಣೆಯಲ್ಲಿ ಬಂದೋಬಸ್ತ್ ವ್ಯವಸ್ಥೆ
ಮಾಡಿದ್ದರು.

ಈ ಬಾರಿಯ ಜಾತ್ರೆಯಲ್ಲಿ ಟ್ರಸ್ಟ್ ಸಮಿತಿಯವರು ಹಾಗೂ ಪೊಲೀಸರು ಸೂಕ್ತ ಹಾಗೂ ಸಮರ್ಪಕ ವ್ಯವಸ್ಥೆ ಮಾಡಿರುವದರಿಂದ ಭಕ್ತರು ದರ್ಶನ ಪಡೆಯುವಾಗ ಯಾವದೆ ನೂಕು ನುಗ್ಗಲು ಉಂಟಾಗದೆ ಸರಳವಾಗಿ ದರ್ಶನ ಪಡೆದರು. ಮುನ್ನೆಚ್ಚರಿಕೆ ವಹಿಸಿರುವದರಿಂದ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿರುವದರಿಂದ ವಾಹನಗಳ ಸಂಚಾರ ಸುಗಮವಾಗಿ ಸಂಚರಿಸಿದವು.

ಸರತಿ ಸಾಲಿನಲ್ಲಿ ನಿಂತು ಭಕ್ತರನ್ನು ಸರಳವಾಗಿ ದರ್ಶನ ಮಾಡಿದರು. ವಾಹನ ಪಾರ್ಕಿಂಗ್’ಗಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದ ಟ್ರಸ್ಟ್ ಹಾಗೂ ಪೊಲೀಸರ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *