ಚಿತ್ತಾಪುರ: ಕನ್ನಡಿಗರ ಶೌರ್ಯ, ಸಾಧನೆ, ಸಾಹಸ, ಪರಾಕ್ರಮತೆ, ತ್ಯಾಗ, ಬಲಿದಾನದ ರೋಚಕ ಇತಿಹಾಸ ಸಾರುವ ಬೋಳವಾಡದ ಸ್ಮಾರಕಗಳ ಬಗ್ಗೆ ಜನಜಾಗೃತಿ ಅವಶ್ಯಕ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೋಳೆವಾಡ ಗ್ರಾಮದ ಭೊಗೇಶ್ವರ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-13 ರಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರ ಕಾಲದ ವೀರಗಲ್ಲುಗಳು, ಶಿಲ್ಪಗಳು, ದೇವಾಲಯ ಸ್ಮಾರಕಗಳು ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುತ್ತವೆ, ವಿವಿದೆಡೆ ಚದುರಿದ ಮೂರ್ತಿಗಳು, ಪಾಳುಬಿದ್ದ ಅನೇಕ ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ, ಐತಿಹಾಸಿಕ ಪ್ರಜ್ಞೆಯ ಮೂಲಕ ಸ್ಮಾರಕಗಳ ರಕ್ಷಣೆ ಅವಶ್ಯವಾಗಿದೆ. ಬೇಲೂರು- ಹಳೆಬೀಡಿಗಿಂತಲೂ ಅದ್ಭುತ ಕಲಾತ್ಮಕ ದೇಗುಲುಗಳು ನಮ್ಮ ಕಲ್ಯಾಣ ಕರ್ನಾಟಕದಲ್ಲಿವೆ. ನೋಡುವ ಸಂವೇದನಶೀಲ ಹೃದಯ ಅವಶ್ಯವಾಗಿದೆ. ಶೈವ, ವೈಷ್ಣವ, ಬೌದ್ಧ, ಜೈನ ಮುಂತಾದ ಸರ್ವ ಧರ್ಮೀಯರು ಸಮನ್ವಯತೆಯಿಂದ ಬಾಳಿ ಬೆಳಗಿದ ನೆಲವೀಡು ಬೋಳೆವಾಡ ಗ್ರಾಮವಾಗಿದೆ. ‘ಕವಿರಾಜಮಾರ್ಗ’, ‘ಮಿತಾಕ್ಷರ ಸಂಹಿತೆ’, ‘ಗಣಿತಸಾರ ಸಂಗ್ರಹ’ ನೀಡಿದ ಪುಣ್ಯ ನೆಲ ಕಲಬುರಗಿ ಜಿಲ್ಲೆಯಲ್ಲಿ ಜನಿಸಿದ್ದು ನಮ್ಮ ಸೌಭಾಗ್ಯವಾಗಿದೆ ಎಂದರು.
ಬಳಗ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಜಿಲ್ಲೆಯಾದ್ಯಾಂತ ಸಂಚರಿಸಿ ನಮ್ಮ ನೆಲದ ಮಕ್ಕಳು, ಯುವಕರು, ಗ್ರಾಮಸ್ಥರಿಗೆ ಐತಿಹಾಸಿಕ ಅರಿವು ಮೂಡಿಸುವ ಕಾರ್ಯ ಪರಿಚಯಾತ್ಮಕ ಸರಣಿ ಕಾರ್ಯಕ್ರಮಗಳ ಮೂಲಕ ಕಳೆದ ಒಂದು ವರ್ಷದಿಂದ ನಿರಂತರವಾಗಿ ನಾವು ಮಾಡುತ್ತಿದ್ದೆವೆ. ಕನ್ನಡಿಗರ ಸಾಧನೆ ತಿಳಿಸುವ ಅದ್ಭುತ ಸ್ಮಾರಕಗಳ ರಕ್ಷಣೆಯು ಗ್ರಾಮಸ್ಥರಿಂದ ಜರುಗಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್ ಬಿರಾದಾರ, ಗ್ರಾಮಸ್ಥರಾದ ಅಣವೀರಯ್ಯ ಎಸ್.ಮಠ, ತಿಪ್ಪಣ್ಣ ಆರ್ ಹತ್ತಿ, ಬಸವರಾಜ ಜಿ.ಹುಳಗೇರಿ, ಧೂಳಪ್ಪ ಡಿ.ಹೊನಮಂಡಿ, ಲಿಂಗರಾಜ ಪಿ.ಸಿದ್ದಗೊಂಡ, ಮಲ್ಲು ಎಂ.ಹಿರೇಪೂಜಾರಿ, ಕಮಲಾಬಾಯಿ ಎಸ್.ಭೋಗಶೆಟ್ಟಿ, ರೇವಣಸಿದ್ದ ಮಹಾಗಾಂವ, ಮಲ್ಲಣ್ಣ ಕುಂಬಾರ, ಚನ್ನಯ್ಯ ಮಠ, ಪ್ರಕಾಶ ಭೋಗಶೆಟ್ಟಿ, ಹರೀಶ ದೊಡ್ಡಮನಿ, ಸುಭಾಷ ಸೋನಾರ, ನೀಲಕಂಠ ಭೋಗಶೆಟ್ಟಿ, ಅಭಿಷೇಕ ಭೋಗಶೆಟ್ಟಿ, ಅಜಯ, ವಿಷ್ಣು ಸೇರಿದಂತೆ ಅನೇಕರು ಇದ್ದರು.