ಕಲಬುರಗಿ: ಸುಡುವ ಬಿಸಿಲಿನಲ್ಲಿ ಪ್ರಮುಖ ವೃತ್ತಗಳಲ್ಲಿ ವಾಹನಗಳ ಸಂಚಾರ ನಿಯಂತ್ರಿಸುವ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಪ್ರಾಯೋಗಿಕವಾಗಿ ಹವಾನಿಯಂತ್ರಿತ (ಎ.ಸಿ) ಹೆಲ್ಮೆಟ್ಗಳನ್ನು ನೀಡಲಾಗಿದೆ. ಇದರ ಜೊತೆಗೆ ಅತ್ಯಾಧುನಿಕ ಸೌಕರ್ಯಗಳ ಉಪಕರಣಗಳನ್ನು ಕಲ್ಪಿಸಲಾಗಿದೆ.
ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತಲಾ 10 ಎ.ಸಿ ಹೆಲ್ಮೆಟ್ ಹಾಗೂ ಮಾಲಿನ್ಯ ತಡೆಯುವ ಮಾಸ್ಕ್ಗಳು,140 ಮಿಂಚುವ ಜಾಕೆಟ್ ಮತ್ತು 150 ಲೈಟ್ ಬ್ಯಾಟೊನ್ಗಳನ್ನು ವಿತರಣೆ ಮಾಡಲಾಯಿತು.
ನಂತರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ಮಾತನಾಡಿ, ಹವಾನಿಯಂತ್ರಿತ ಹೆಲ್ಮೆಟ್ಗಳು ನಮ್ಮ ಸಂಚಾರಿ ಸಿಬ್ಬಂದಿಗೆ ಬೇಸಿಗೆಯ ಬಿಸಿಲಿನಿಂದ ರಕ್ಷಣೆ ನೀಡಲಿವೆ. ಪ್ರಾಥಮಿಕ ಹಂತದಲ್ಲಿ ಪ್ರಾಯೋಗಿಕವಾಗಿ ಕೆಲವರಿಗೆ ಮಾತ್ರ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಗೆ ನೀಡಲಾಗುವುದು ಎಂದರು.
ಎ.ಸಿ ಹೆಲ್ಮೆಟ್ ಧರಿಸಿ ಬಿಸಿಲಿನ ಅತ್ಯಧಿಕ ತಾಪಮಾನ ಇರುವ ಬೆಳಿಗ್ಗೆ 11ರಿಂದ ಸಂಜೆ 5ರ ವರೆಗೆ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಬಹುದು, ಎ.ಸಿ ಹೆಲ್ಮೆಟ್ನ ಬ್ಯಾಟರಿಯು ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ನಡೆಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಬಿಸಿಲು ಇರುವುದರಿಂದ ಕಲಬುರಗಿಯಲ್ಲಿ
ಮೊದಲ ಬಾರಿಗೆ ಎ.ಸಿ ಹೆಲ್ಮೆಟ್ ಪರಿಚಯಿಸಲಾಗಿದೆ ಎಂದರು.
ಟ್ರಾಫಿಕ್ ಸಿಗ್ನಲ್, ಗಸ್ತಿನಲ್ಲಿರುವ ಪೊಲೀಸ್ ಸಿಬ್ಬಂದಿಗೆ ಈಗಾಗಲೆ ಕುಡಿಯುವ ನೀರು, ಮಜ್ಜಿಗೆ ಹಾಗೂ ಜ್ಯೂಸ್ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಗಸ್ತಿಗಾಗಿ ವಾಹನ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ಎಚ್ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.