ನಾಡು-ನುಡಿಗೆ ಬೇಂದ್ರೆಯವರ ಕೊಡುಗೆ ಅಪಾರ: ಸಿ.ಎಸ್ ಮಾಲಿಪಾಟೀಲ

ಜಿಲ್ಲೆ

ಕಲಬುರಗಿ: ಮಾನವೀಯ ಮೌಲ್ಯ, ನೈಜತೆಗಳಿಂದ ಕೂಡಿದ ಸಾಹಿತ್ಯ ರಚಿಸಿ ಕನ್ನಡ ನಾಡು-ನುಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್ ಮಾಲಿಪಾಟೀಲ ಹೇಳಿದರು.

ನಗರದ ಗಂಜ್ ಬಸ್ ಸ್ಟಾಂಡ್ ಸಮೀಪದ ಆಚಾರ್ಯ ಪದವಿ ಪೂರ್ವ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ವರಕವಿ ಡಾ.ದ.ರಾ ಬೇಂದ್ರೆಯವರ 129ನೇ ಜನ್ಮದಿನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿದ ಅವರು, ಸಮಾಜ ನಿರ್ಮಾಣಕ್ಕೆ ಅನುಭವ, ನೈಜತೆ, ಮೌಲ್ಯಗಳಿಂದ ಕೂಡಿದ ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದ ಡಾ.ದ.ರಾ ಬೇಂದ್ರೆಯವರ ಸಾಹಿತ್ಯ, ಕೃತಿಗಳು ವಿಮರ್ಶಕರು ಹಾಗೂ ಸಹೃದಯ ವಿಮರ್ಶಗೆ ಇಂದಿಗೂ ಕೂಡಾ ದಕ್ಕದಿರುವದು ಗಮನಿಸಿದರೆ, ಅವರ ಮೇರು ವ್ಯಕ್ತಿತ್ವ ನಮಗೆ ತಿಳಿಯುತ್ತದೆ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿನ ಪ್ರಮುಖವಾದ ಸಾಹಿತಿಯಾಗಿದ್ದಾರೆ ಎಂದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಹಾಗೂ ಲೇಖಕ ಎಚ್.ಬಿ ಪಾಟೀಲ ಮಾತನಾಡಿ, ಬೇಂದ್ರೆಯವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ, ಅವುಗಳನ್ನು ಸಾಹಿತ್ಯದಲ್ಲಿ ಕೃಷಿ ಮಾಡಿದ್ದರಿಂದ ಅವರ ಸಾಹಿತ್ಯವು ಹೆಚ್ಚು ನೈಜತೆ ಹಾಗೂ ಗಟ್ಟಿತನದಿಂದ ಕೂಡಿದೆ. ಅವರಂತೆ ಸಾಹಿತ್ಯಕವಾಗಿ ಮೇರು ಸಾಧನೆ ಮಾಡಬೇಕಾದರೆ, ಸಾಕಷ್ಟು ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ‘ಜೀವನದಲ್ಲಿ ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯವಿದೆ’. ಬೇಂದ್ರೆಯವರ ಸಾಹಿತ್ಯದಲ್ಲಿ ದೇಶಿ ಸೊಗಡು ಹಾಸು ಹೊಕ್ಕಿದೆ. ಮರಾಠಿ ಮಾತೃಭಾಷೆಯಾದರು ಕೂಡಾ, ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಎ.ಬಿರಾದಾರ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *