ಕಲಬುರಗಿ: ಬೆಂಕಿ ಅವಗಡ, ಭೂಕಂಪ, ಅತಿವೃಷ್ಟಿ, ನೆರೆ ಹಾವಳಿ, ಪ್ರವಾಹದಂತಹ ತುರ್ತು ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಸಾರ್ವಜನಿಕರ ಜೀವ ರಕ್ಷಿಸುವ ಅಗ್ನಿಶಾಮಕರು ಸಮಾಜದ ಕಾವಲುಗಾರ ಹಾಗೂ ರಕ್ಷಕರಾಗಿದ್ದಾರೆ. ಅವರಿಗೆ ಸಾರ್ವಜನಿಕ ಸುರಕ್ಷತೆ, ಸಮಾಜದ ರಕ್ಷಣೆಯೆ ಪ್ರಮುಖವಾಗಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಅಂಕುಶ್ ಎ ಆಳಂದೆ ಅಭಿಪ್ರಾಯಪಟ್ಟರು.
ನಗರದ ಅಗ್ನಿಶಾಮಕ ಠಾಣೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಅಗ್ನಿಶಾಮಕ ಠಾಣೆಯ ಜಂಟಿ ಆಶ್ರಯದಲ್ಲಿ ರವಿವಾರ ಏರ್ಪಡಿಸಿದ್ದ್ ‘ಅಂತಾರಾಷ್ಟ್ರೀಯ ಅಗ್ನಿಶಾಮಕರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಡಿಸೆಂಬರ್ 2, 1998 ರಂದು ಆಸ್ಟ್ರೇಲಿಯಾದ ಲಿಂಟನ್ ಪಟ್ಟಣದಲ್ಲಿ ಜರುಗಿದ ದುರಂತ ಘಟನೆಯಲ್ಲಿ, ಕಾಡ್ಗಿಚ್ಚನ್ನು ನಂದಿಸಲು ಪ್ರಯತ್ನಿಸುವಾಗ ಆಮ್ಸಾ÷್ಟçಂಗ್, ಗ್ಯಾರಿ ವ್ರೆಡೆವೆಲ್ಡ್ಟ್, ಕ್ರಿಸ್ ಇವಾನ್ಸ್, ಸ್ಟುವರ್ಟ್ ಡೇವಿಡ್ಸನ್, ಜೇಸನ್ ಥಾಮಸ್ ಎಂಬ ಐದು ಜನ ಅಗ್ನಿಶಾಮಕ ಸಿಬ್ಬಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಇಂತಹ ಸಿಬ್ಬಂದಿಗಳಿಗೆ ನಮನ ಸಲ್ಲಿಸಲು ‘ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಆಚರಣೆ ಪ್ರಾರಂಭವಾಯಿತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ರಾಷ್ಟ್ರದ ರಕ್ಷಣೆಯಲ್ಲಿ ಅಗ್ನಿಶಾಮಕರ ಪಾತ್ರ ಅನನ್ಯವಾಗಿದೆ. ಅವರು ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕರು, ಆಸ್ತಿ-ಪಾಸ್ತಿ, ಪಶು-ಪ್ರಾಣಿಗಳನ್ನು ರಕ್ಷಿಸುತ್ತಾರೆ. ಅಗ್ನಿಶಾಮಕ ತುರ್ತು ಸಂಖ್ಯೆಗೆ ಕರೆ ಮಾಡಿದ ತಕ್ಷಣ ವೇಗವಾದಿ ಧಾವಿಸಿ ತಮ್ಮ ರಕ್ಷಣಾ ಕಾರ್ಯ ಮಾಡುತ್ತಾರೆ. ರಕ್ಷಣೆಯ ಸಂದರ್ಭದಲ್ಲಿ ಅನೇಕ ಜನ ಸಿಬ್ಬಂದಿ ಪ್ರಾಣತ್ಯಾಗ ಮಾಡಿ, ಸಾರ್ವಜನಿಕರನ್ನು ರಕ್ಷಿಸುವ ಮೂಲಕ ತ್ಯಾಗಮಯಿಗಳಾಗಿದ್ದಾರೆ. ಆದ್ದರಿಂದ, ಅಗ್ನಿಶಾಮಕರಿಗೆ ಸಮಾಜದ ಪ್ರೋತ್ಸಾಹ, ಗೌರವ ನೀಡುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಗೌರವ ಸಲಹೆಗಾರ ಡಾ.ಸುನೀಲಕುಮಾರ ಎಚ್.ವಂಟಿ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ, ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳಾದ ಆಂಜನೇಯ್, ಶಿವರಾಜ ರಾಜನಾಳ, ಲಕ್ಷ್ಮಣ, ಸಿಬ್ಬಂದಿಗಳಾದ ಶಾಂತಪ್ಪ ನೆಲೋಗಿ, ರಮೇಶಕುಮಾರ, ಮೋತಿಲಾಲ್ ಪತಂಗೆ, ಸುಧಾಕರ, ಸತೀಶಕುಮಾರ, ಶಂಕರಲಿಂಗ ಸೇರಿದಂತೆ ಮತ್ತಿತರ ಸಿಬ್ಬಂದಿ ಪಾಲ್ಗೊಂಡಿದ್ದರು.