ಬೆಂಗಳೂರು: 1987ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ‘ಪ್ರೇಮಲೋಕ’ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ ಎಂದು ರವಿಚಂದ್ರನ್ ಹೇಳಿದ್ದರು. ಆದರೆ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಳೆದ ವರ್ಷ ಮೇ ತಿಂಗಳಲ್ಲೇ ಸಿನಿಮಾದ ಶೂಟ್ ಆರಂಭ ಆಗಬೇಕಿತ್ತು. ಆದರೆ ರವಿಚಂದ್ರನ್ ಈ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲ. ಈಗ ಸಿನಿಮಾ ವಿಳಂಬಕ್ಕೆ ಕಾರಣ ವಿವರಿಸಿದ್ದಾರೆ.
ಪ್ರೇಮಲೋಕ ಚಿತ್ರದಲ್ಲಿ ಬರೋಬ್ಬರಿ 11 ಹಾಡುಗಳು ಇದ್ದವು. ಸಾಂಗ್ ಬಗ್ಗೆ ತಿಳಿದ ಬಳಿಕ ಅನೇಕರು ನಿರ್ಮಾಣದಿಂದ ಹಿಂದೆ ಸರಿದಿದ್ದರು. ಆ ಬಳಿಕ ರವಿಚಂದ್ರನ್ ಅವರೇ ಈ ಚಿತ್ರ ನಿರ್ಮಾಣ ಮಾಡಿ ಯಾರು ಊಹಿಸದ ರೀತಿಯಲ್ಲಿ ಗೆಲುವು ಕಂಡರು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬರೋಬ್ಬರಿ 24 ಹಾಡುಗಳು ಇರಲಿವೆ ಎಂದು ಈ ಮೊದಲೆ ತಿಳಿಸಿದ್ದರು. ಈಗ ಸಿನಿಮಾ ಶೂಟಿಂಗ್ ವಿಳಂಬಕ್ಕೆ ಕಾರಣವನ್ನು ಅವರು ರಿವೀಲ್ ಮಾಡಿದ್ದಾರೆ.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್, ಹಾಡು ಸಿದ್ಧವಾಗಿದೆ, ಲೊಕೇಶನ್ ಸಿದ್ಧವಾಗುತ್ತಿಲ್ಲ. ಸಿನಿಮಾದ ಎಲ್ಲಾ 24 ಹಾಡುಗಳು ರೆಡಿ ಇವೆ. ಇದು ಜನರ ಮಧ್ಯೆ ನಡೆಯುವ ಕಥೆ. ಶೂಟಿಂಗ್ಗೆ ಜನರು ಕೋ ಆಪರೇಟ್ ಮಾಡಬೇಕು. ರಸ್ತೆಗಳ ಮಧ್ಯೆ ನಡೆಯುವ ಕಥೆ ಆದ್ದರಿಂದ ಈ ಟ್ರಾಫಿಕ್ನಲ್ಲಿ ಸಿನಿಮಾ ಶೂಟ್ ಮಾಡೋದು ಕಷ್ಟ. ನಾವು ಎರಡು-ಮೂರು ಬಾರಿ ಪ್ರಯತ್ನ ಮಾಡಿದೆವು. ಜನರ ಕಂಟ್ರೋಲ್ ಮಾಡೋಕೆ ಆಗಿಲ್ಲ ಎಂದರು.
ನಾವು ಅಂದುಕೊಂಡಂತೆ ಹಾಡುಗಳ ಚಿತ್ರೀಕರಣ ಮಾಡಲಾಗುತ್ತಿಲ್ಲ. ಒಂದು ಊರನ್ನೇ ಕಟ್ಟಬೇಕಾಗಿ ಬರಹುದು. ಅದಕ್ಕೊಂದು ಜಾಗವನ್ನು ನಾವೇ ಸೃಷ್ಟಿ ಮಾಡಬೇಕಿದೆ. ಹೀಗಾಗಿ ನಾವು ಅಂದುಕೊಂಡದ್ದಕ್ಕಿಂತ ವಿಳಂಬ ಆಗುತ್ತಿದೆ ಎಂದರು.
ಸದ್ಯ ರವಿಚಂದ್ರನ್ ಅವರು ‘ಐ ಆ್ಯಮ್ ಗಾಡ್ ದ ಕ್ರೇಜಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಇದು ಪ್ರಯೋಗಾತ್ಮಕ ಸಿನಿಮಾ ಆಗಲಿದೆ. ಎದೆ ತಟ್ಟಿಕೊಂಡು ಹೇಳ್ತಿನಿ, 2026 ನಂದೇ ಆಗಿರುತ್ತದೆ ಎಂದು ರವಿಚಂದ್ರನ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.