ಊಟ ಮುಗಿಸಿ ಬರುವಷ್ಟರಲ್ಲಿ 97 ಲಕ್ಷ ರೂ ತೆಗೆದುಕೊಂಡು ಪರಾರಿಯಾದ ಡ್ರೈವರ್

ರಾಜ್ಯ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದ ಘಟನೆ ಸಿನಿಮಾ ದೃಶ್ಯವನ್ನು ಹೋಲಿಸುವಂತಿತ್ತು. ಬಾಡಿಗೆ ಕಾರು ಚಾಲಕನು ಕಾರಿನಲ್ಲಿದ್ದ 97 ಲಕ್ಷ ರೂ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ ಆದರೆ ಚಳ್ಳಕೆರೆ ಪೊಲೀಸರು ತಕ್ಷಣ ಬೆನ್ನಟ್ಟಿ ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮೂಲದ ನಿವೃತ್ತ ಸಿಬಿಐ ಎಸ್ಪಿ ಗುರುಪ್ರಸಾದ್ ತಮ್ಮ ಪತ್ನಿ ಲಲಿತಾ ಜೊತೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ಕುಟುಂಬದ ಜಮೀನು ಮಾರಾಟ ಮಾಡಿ 97 ಲಕ್ಷ ರೂ ತೆಗೆದುಕೊಂಡು ಬೆಂಗಳೂರಿಗೆ ಹಿಂತಿರುಗುವಾಗ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆಂಧ್ರದ ಹಿಂದೂಪುರ ಮೂಲದ ರಮೇಶ್ ಎಂಬುವನಿಗೆ ಸೇರಿದ ಕಾರು ಇದಾಗಿದೆ.

ಹೋಟೆಲ್‌ನಲ್ಲಿ ಊಟ – ಚಾಲಕನ ಎಸ್ಕೇಪ್
ಚಳ್ಳಕೆರೆ ಪಟ್ಟಣದ ಬಳಿ ದಂಪತಿ ಊಟ ಮಾಡಲು ಕಾರು ನಿಲ್ಲಿಸಿ ಹೋಟೆಲ್‌ಗೆ ತೆರಳಿದರು. ಊಟ ಮುಗಿಸಿ ಹೊರಬಂದು ನೋಡಿದರೆ ಚಾಲಕ ರಮೇಶ್ ಕಾರಿನಲ್ಲಿದ್ದ ಹಣ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದನು. ತಕ್ಷಣ ಗುರುಪ್ರಸಾದ್ ಪೊಲೀಸರಿಗೆ ದೂರು ನೀಡಿದರು.

ಸಿನಿಮೀಯ ರೀತಿಯ ಬೆನ್ನಟ್ಟುವಿಕೆ
ಮಾಹಿತಿ ತಿಳಿದ ಕೂಡಲೇ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಮತ್ತು ಸಿಪಿಐ ಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಕಾರನ್ನು ಹಿಂಬಾಲಿಸಿದ ಪೊಲೀಸರು ರಮೇಶ್ ಆಂಧ್ರದತ್ತ ಕಾರನ್ನು ಚಲಾಯಿಸುತ್ತಿರುವುದು ಪತ್ತೆಹಚ್ಚಿದರು. ಪೊಲೀಸರ ಬೆನ್ನಟ್ಟುವಿಕೆ ಅರಿತ ಆರೋಪಿ ವೇಗವಾಗಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದನು.

ಆರೋಪಿಯ ಬಂಧನ ಮತ್ತು ಹಣ ವಶ
ಈ ಘಟನೆಯ ನಂತರ, ಪೊಲೀಸರು ಆರೋಪಿ ರಮೇಶ್‌ನ್ನು ಬಂಧಿಸಿ, ಕಾರಿನಲ್ಲಿದ್ದ 97 ಲಕ್ಷ ರೂ ಹಣ ಮತ್ತು ವಾಹನವನ್ನು ವಶಕ್ಕೆ ಪಡೆದರು. ಆರೋಪಿಯ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜನಮನ ಸೆಳೆದ ಕಾರ್ಯಾಚರಣೆ
ಈ ಪ್ರಕರಣದಲ್ಲಿ ಪೊಲೀಸರ ತ್ವರಿತ ಕಾರ್ಯಾಚರಣೆ, ಸಿನಿಮೀಯ ರೀತಿಯ ಬೆನ್ನಟ್ಟುವಿಕೆ ಜನಮನ ಸೆಳೆದಿದೆ, ನಿವೃತ್ತ ಎಸ್ಪಿ ಗುರುಪ್ರಸಾದ್ ಮತ್ತು ಅವರ ಕುಟುಂಬ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *