ಮುಂಬೈ: ದೇಶದಲ್ಲೆ ಮೊದಲ ಬಾರಿಗೆ ರೈಲಿನಲ್ಲಿ ಸ್ಥಾಪಿಸಲಾದ ಎಟಿಎಂನ (ATM) ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಸಹಯೋಗದೊಂದಿಗೆ ಮನ್ಮಾಡ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಪ್ರಾಯೋಗಿಕ ಪರೀಕ್ಷೆಯ ಬಳಿಕ ಈಶಾನ್ಯ ಗಡಿನಾಡು ರೈಲ್ವೆಗಳಲ್ಲಿ ಎಟಿಎಂಗಳನ್ನು ಪರಿಚಯಿಸಲು ನಿರ್ಧರಿಸಿದೆ. ನಾಸಿಕ್‌ನ ಮನ್ಮಾಡ್ ಮತ್ತು ಮುಂಬೈ ನಡುವೆ ಸಂಚರಿಸುವ ಪಂಚವಟಿ ಎಕ್ಸ್ಪ್ರೆಸ್ನ ಎಸಿ ಕೋಚ್‌ನಲ್ಲಿ ಎಟಿಎಂ ಸ್ಥಾಪಿಸಲಾಗಿದೆ.
ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಾಯೋಗಿಕ ಪರೀಕ್ಷೆ ವೇಳೆ ಇಗತ್ಪುರಿ ಮತ್ತು ಕಸರಾ ಪ್ರದೇಶದಲ್ಲಿ ಸಿಗುವ ಕಡಿಮೆ ನೆಟ್‌ವರ್ಕ್ ಹೊರತುಪಡಿಸಿ, ಯಾವುದೆ ಅಡಚಣೆಯಿಲ್ಲದೆ ಎಟಿಎಂ ಕಾರ್ಯನಿರ್ವಹಿಸಲಿದೆ. ಸುಗಮವಾಗಿ ಸಂಚರಿಸಿದೆ. ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನೆ ಅಡಿಯಲ್ಲಿ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಪಾಲುದಾರಿಕೆಯಲ್ಲಿ ಈ ಎಟಿಎಂ ಪರಿಚಯಿಸಲಾಗಿದೆ.
ಈ ಕುರಿತು ಭೂಸಾವಲ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ ಮಾತನಾಡಿ, ಭೂಸಾವಲ್ ವಿಭಾಗವು ಆಯೋಜಿಸಿದ್ದ ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನಾ ಸಭೆಯಲ್ಲಿ ರೈಲುಗಳಲ್ಲಿ ಎಟಿಎಂ ಸ್ಥಾಪಿಸುವ ಕುರಿತು ಮಂಡಿಸಲಾಯಿತು. ಬಳಿಕ ಈ ಕುರಿತು ಚರ್ಚೆ ನಡೆಸಲಾಗಿದೆ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಉತ್ತಮವಾಗಿದ್ದು, ಜನರು ಚಲಿಸುವ ರೈಲಿನಲ್ಲಿ ಎಟಿಎಂ ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಸದ್ಯ ಪಂಚವಟಿ ಎಕ್ಸ್ಪ್ರೆಸ್ನ ಎಸಿ ಕೋಚ್‌ನಲ್ಲಿ ಎಟಿಎಂ ಅಳವಡಿಸಲಾಗಿದ್ದು, ರೈಲಿನ ಎಲ್ಲಾ 22 ಬೋಗಿಗಳಲ್ಲಿರುವ ಪ್ರಯಾಣಿಕರು ಎಸಿ ಕೋಚ್‌ಗೆ ಬಂದು ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದು.
ಮುಂಬೈ-ಹಿಂಗೋಲಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಪಂಚವಟಿ ಎಕ್ಸ್‌ಪ್ರೆಸ್‌ನೊಂದಿಗೆ ತನ್ನ ರೇಕ್ ಅನ್ನು ಹಂಚಿಕೊಳ್ಳುವುದರಿಂದ, ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರಿಗೂ ಈ ಎಟಿಎಂ ಲಭ್ಯವಿರುತ್ತದೆ. ಹೀಗಾಗಿ ಮುಂಬೈ-ಹಿಂಗೋಲಿ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರೂ ಕೂಡ ಎಟಿಎಂನ ಲಾಭ ಪಡೆದುಕೊಳ್ಳಬಹುದು ಎಂದಿದ್ದಾರೆ.
ಪ್ರಯಾಣಿಕ ಸಂಜಯ್ ಎಂಬುವವರು ಮಾತನಾಡಿ, ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವುದರ ಜೊತೆಗೆ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್, ಚೆಕ್ ಬುಕ್ ಆರ್ಡರ್ ಮಾಡಬಹುದಾಗಿದೆ ಎಂದು ತಿಳಿಸಿದರು.
ರೈಲ್ವೆ ಅಧಿಕಾರಿಯೊಬ್ಬರು ಮಾತನಾಡಿ, ಈ ಸೇವೆ ಜನಪ್ರಿಯವಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಸ್ಥಾಪಿಸಲಾಗುವುದು ಮತ್ತು ಭದ್ರತೆಗಾಗಿ ಎಟಿಎಂ ಶಟರ್ ವ್ಯವಸ್ಥೆಯನ್ನು ಹೊಂದಿದ್ದು, 24/7 ಸಿಸಿಟಿವಿ ಕಣ್ಗಾವಲು ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.