ಚಿತ್ತಾಪುರ: ತಾಲೂಕಿನ ಅಲ್ಲೂರ (ಬಿ) ಗ್ರಾಮದ ನಿವಾಸಿ ಹಿರಿಯ ಪತ್ರಕರ್ತ, ಲೇಖಕ ನಾಗಯ್ಯಸ್ವಾಮಿ ಅಲ್ಲೂರು (55) ಶನಿವಾರ ಸಂಜೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಚಿತ್ತಾಪುರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಹೋದರ ರಾಚಯ್ಯಸ್ವಾಮಿ ಅಲ್ಲೂರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಅಂತ್ಯಕ್ರಿಯೆ ಅಲ್ಲೂರ (ಬಿ) ಗ್ರಾಮದ ಸ್ವಂತ ಜಮೀನಿನಲ್ಲಿ ರವಿವಾರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, ಜಾನಪದ ಸಾಹಿತ್ಯ ಪರಿಷತ್, ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ವಿಶ್ವ ಜನ ಸಂಸ್ಥೆಯ ಅಧ್ಯಕ್ಷರಾಗಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ತಾಲೂಕು ವರದಿಗಾರರಾಗಿ ಸೇವೆಯಲ್ಲಿದ್ದರು. ಅಳ್ಳೊಳ್ಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ ಈ ನಿಟ್ಟಿನಲ್ಲಿ ಸಾಹಿತ್ಯ ಸಾಂಸ್ಕೃತಿಕ, ಪತ್ರಿಕಾ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೆಯಾದ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.
ನಾಗಯ್ಯಸ್ವಾಮಿ ಅಲ್ಲೂರ್ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಸಂತಾಪ ಸೂಚಿಸಿದ್ದಾರೆ.
2012ರಲ್ಲಿ ಮಹಿಪಾಲರೆಡ್ಡಿ ಮುನ್ನೂರ ಕಸಾಪ ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಶತಮಾನ ವರ್ಷದಲ್ಲಿದ್ದ ಕಸಾಪದ ಚಿತ್ತಾಪುರ ತಾಲೂಕಿನಲ್ಲಿ ಪ್ರಥಮ ತಾಲೂಕು ಕಸಾಪ ಸಮ್ಮೇಳನ ಮಾಡಿದ ಕೀರ್ತಿ ನಾಗಯ್ಯ ತವರಿಗೆ ಸಲುತ್ತದೆ.
ಕವಿ ಸಮ್ಮೇಳನ ಮತ್ತು ಹೋಬಳಿಯಲ್ಲಿ ಸಹ ಸಮ್ಮೇಳನ ಮಾಡಿದ್ದು ಕೂಡ ಅವರ ಸಂಘಟನೆಗೆ ಸಾಕ್ಷಿ.
ಅಂತಹ ಸಾಹಿತ್ಯದ ಮನಸುಳ್ಳ ನಾಗಯ್ಯ ಸ್ವಾಮಿ ಅವರ ನಿಧನ ಸಾಹಿತ್ಯ ಲೋಕಕ್ಕೆ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ.