ನೇಕಾರರಿಗೆ ಆರ್ಥಿಕ ಭದ್ರತಾ ಸೌಲಭ್ಯ ದೊರೆಯಲಿ

ತಾಲೂಕು

ಕಲಬುರಗಿ: ಸಮಾಜಕ್ಕೆ ಬಟ್ಟೆ ನೀಡಿ ಮಾನವನ್ನು ಕಾಪಾಡುವ ನೇಕಾರರ ಬದುಕು ಸಂಕಷ್ಟದಲ್ಲಿದೆ. ವೃತ್ತಿಗೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯ, ಆರ್ಥಿಕ ಸಹಾಯ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಟ್ಟು, ನೇಕಾರರ ಬದುಕು ಹಸನುಗೊಳಿಸುವ ಕಾರ್ಯವಾಗಬೇಕು ಎಂದು ಹಿರಿಯ ಕೈಮಗ್ಗ ಮಹಾದೇವ ಹುಲ್ಮನಿ ಒತ್ತಾಸೆ ಮಾಡಿದರು.

ಆಳಂದ ತಾಲೂಕಿನ ಸುಂಟನೂರ ಗ್ರಾಮದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘11ನೇ ರಾಷ್ಟೀಯ ಕೈಮಗ್ಗ ನೇಕಾರರ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ನೇಕಾರರು ನೂರಾರು ವರ್ಷಗಳಿಂದ ಬಟ್ಟೆ ನೇಯ್ಗೆ ವೃತ್ತಿಯನ್ನೇ ಅವಲಂಬಿಸಿ, ಅನೇಕ ಸಮಸ್ಯೆಗಳಿದ್ದರು ಇಂದಿಗೂ ಕೂಡಾ ತಮ್ಮ ವೃತ್ತಿಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದರು.

ನೇಕಾರ ಯುವ ಮುಖಂಡ ಶಂಕರ ಹುಲ್ಮನಿ ಮಾತನಾಡಿ, ನೇಕಾರರಿಗೆ ಶ್ರಮಕ್ಕೆ ತಕ್ಕಂತೆ ಕೂಲಿ ದೊರೆಯುತ್ತಿಲ್ಲ. ಉತ್ತಮ ಗುಣಮಟ್ಟದ ಸಲಕರಣಗಳ ಪೂರೈಕೆಯಾಗಬೇಕು. ಸರ್ಕಾರದ ಯೋಜನೆಗಳು ಸೂಕ್ತ ವ್ಯಕ್ತಿಗೆ ತಲುಪಬೇಕು. ವಸತಿ, ವಿಮಾ ಸೌಲಭ್ಯ, ನೇಕಾರ ಮರಣ ಹೊಂದಿದ ನಂತರ ಆತನ ಅವಲಂಬಿತರಿಗೆ ಪಿಂಚಣಿ ನೀಡಬೇಕು. ಸರಳವಾಗಿ ಸಾಲ ಸೌಲಭ್ಯ ದೊರೆಯಬೇಕಾಗಿದೆ. ನೇಕಾರರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು. ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಲೆ ದೊರೆಯಬೇಕು. ನಮ್ಮ ಗ್ರಾಮದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಶಾಖೆ ಆರಂಭಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ, ಆಧುನಿಕತೆ ಹಾಗೂ ಕೈಗಾರಿಕಾ ಕ್ರಾಂತಿಯಿಂದಾಗಿ ನಮ್ಮ ದೇಶದ ಮೂಲ ವೃತ್ತಿ, ಕಸುಬುಗಳು, ಗೃಹ ಕೈಗಾರಿಕೆಗಳು ಪ್ರಸ್ತುವಾಗಿ ಅವನತಿಯ ಅಂಚಿನಲ್ಲಿವೆ. ಇದರಿಂದ ವೃತ್ತಿ ಅವಲಿಂಬಿತ ಅನೇಕ ಜನರು ಸಂಕಷ್ಟದಲ್ಲಿದ್ದಾರೆ. ಗುಡಿ, ಗೃಹ ಕೈಗಾರಿಕೆಗಳು ಉಳಿದರೆ ಮಾತ್ರ ಮೂಲ ವೃತ್ತಿ ಉಳಿದು, ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ರಾಷ್ಟçದ ಆರ್ಥಿಕ ಪ್ರಗತಿ ವೃದ್ಧಿಯಾಗಲಿದೆ. ರಾಷ್ಟು ಆರ್ಥಿಕ ಪ್ರಗತಿ ಮತ್ತು ಸಂಸ್ಕೃತಿಯ ಉಳಿಯುವಿಕಯಲ್ಲಿ ನೇಕಾರರ ಪಾತ್ರ ಅನನ್ಯವಾಗಿದೆ. ನೇಕಾರರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರದ ಯೋಜನಗೆಳನ್ನು ಸದುಪಯೋಗಮಾಡಿಕೊಳ್ಳಬೇಕು. ನೇಕಾರರ ಅಭಿವೃದ್ಧಿಗೆ ಪೂರಕವಾದ ನೀತಿಗಳ ಪರಿಣಾಮಕಾರಿ ಅನುಷ್ಠಾನವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವೃತ್ತಿ ನೇಕಾರರಾದ ಶಂಕರ ಗಸನಿ ಮತ್ತು ಸಕುಬಾಯಿ ಬಿ.ಹಾವಗೊಂಡ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ಸಮಾಜ ಸೇವಕ ಡಾ.ರಾಜಶೇಖರ ಪಾಟೀಲ ಹೆಬಳಿ, ಗ್ರಾಮದ ನೇಕಾರರಾದ ರವೀಂದ್ರ ಜೋಳದ, ಬಾಬುರಾವ ಹಾವಗೊಂಡ, ವಿನಾಯಕ ದಸೂರ್, ಪಾರ್ವತಿ ಹುಲ್ಮನಿ, ವೈಜಯಂತಿ ಹಾವಗೊಂಡ, ಸುನಿತಾ ಹಾವಗೊಂಡ, ವಿಠಲ ಗುಂಡದ ಸೇರಿದಂತೆ ಗ್ರಾಮಸ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *