ಅರಣ್ಯ ಸಂರಕ್ಷಣೆ ಸರ್ವರ ಜವಾಬ್ದಾರಿ: ಪೀರಪ್ಪ ಕಟ್ಟಿ

ಗ್ರಾಮೀಣ

ಚಿತ್ತಾಪುರ: ಅರಣ್ಯ ಸಂಪತ್ತು ಕಾಪಾಡುವುದರ ಜೊತೆಗೆ ಉಳಿದ ಪ್ರದೇಶದಲ್ಲಿಯೂ ಗಿಡ-ಮರಗಳನ್ನು ಬೆಳೆಸುವದು ಅರಣ್ಯ ಇಲಾಖೆ, ಕೆಲವು ಸಂಘ-ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳ ಕಾರ್ಯವಾಗದೆ, ಸರ್ವರ ಜವಾಬ್ದಾರಿಯಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಪೀರಪ್ಪ ಕಟ್ಟಿ ಅಭಿಮತಪಟ್ಟರು.

ತಾಲೂಕಿನ ಮಾಡಬೂಳ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜರುಗಿದ ‘ವಿಶ್ವ ಅರಣ್ಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ, ಅನೇಕ ಗಿಡ-ಮರಗಳನ್ನು ನಾಶಪಡಿಸುವುದರ ಮೂಲಕ, ಪರಿಸರ ಅಸಮತೋಲನಕ್ಕೆ ಕಾರಣವಾಗಿದ್ದಾನೆ. ಇದರಿಂದ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಗಂಡಾತರ ತಪ್ಪಿದಲ್ಲ ಎಂದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ನಮ್ಮ ದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇ.33ರಷ್ಟು ಅರಣ್ಯದ ಅವಶ್ಯಕತೆಯಿದೆ. ಆದರೆ ಪ್ರಸ್ತುತ ಇದರ ಪ್ರಮಾಣ ಸುಮಾರು ಶೇ.21.71ರಷ್ಟಿದೆ. ಇದರಿಂದ ಹಸಿರು ಮನೆ ಪರಿಣಾಮ ಉಂಟಾಗಿ, ಜಾಗತಿಕ ತಾಪಮಾನದಲ್ಲಿ ಏರಿಕೆ ಉಂಟಾಗುತ್ತಿದೆ. ಹಸಿರುಮಯ ವಾತಾವರಣ ಕಾಣೆಯಾಗಿ, ಕಾಂಕ್ರೀಟ್ ಕಟ್ಟಡಗಳು ಎಲ್ಲೆಡೆ ತಲೆಯೆತ್ತಿವೆ. ಜೊತೆಗೆ ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ಉಂಟಾಗಿದೆ. ಕುಡಿಯಲು ನೀರಿಲ್ಲದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಸಸ್ಯವರ್ಗ ಹಾಗೂ ಪ್ರಾಣಿವರ್ಗಗಳ ಮೇಲೆ ಸಾಕಷ್ಟು ದುಷ್ಪರಿಣಾಮವಾಗುತ್ತಿದೆ ಎಂದರು.

ಸಮಾಜ ಸೇವಕ ರವಿ ನಾಯಕ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ-ಮುತ್ತಲೂ ಗಿಡಗಳನ್ನು ನೆಟ್ಟು, ಪೋಷಿಸಬೇಕು. ಇದರಿಂದ ಉತ್ತಮ ವಾತಾವರಣ ದೊರೆಯುತ್ತದೆ ಎಂದರು.

ಎಸಿಎಫ್ ಸುನಿಲ್ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಅರಣ್ಯ ರಕ್ಷಕ ಶ್ರೀಕಾಂತ ಬಿ, ಅರಣ್ಯ ವೀಕ್ಷಕರಾದ ರಾಮು ರಾಠೋಡ, ಶರಣಬಸಪ್ಪ ರಾಠೋಡ, ಪ್ರಮುಖರಾದ ಹರಿಶ್ಚಂದ್ರ ಪವಾರ ಕಾರಬಾರಿ, ನರಸಪ್ಪ ದೊರೆ, ಕಾರ್ಯನಿರತ ಮಹಿಳಾ ಕಾರ್ಮಿಕರು, ಗ್ರಾಮಸ್ಥರು, ತಾಂಡಾದ ನಿವಾಸಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *