ಸಮಾಜಮುಖಿ ಕಾವ್ಯ, ಸಾಹಿತ್ಯ ಸಾರ್ವಕಾಲಿಕ

ಜಿಲ್ಲೆ

ಕಲಬುರಗಿ: ಕಲ್ಪನೆ ಆಧಾರಿತ, ವಾಸ್ತವಿಕತೆಗೆ ದೂರವಿರುವ, ಪ್ರಸ್ತುತವೆನಿಸದ ಸಾಹಿತ್ಯದಿಂದ ಸಮಾಜಕ್ಕೆ ಪ್ರಯೋಜನೆಯಾಗಲಾರದು. ಬದಲಿಗೆ ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವುಗಳಿಗೆ ಪರಿಹಾರ ಸೂಚಿಸುವ, ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಸಾಹಿತ್ಯ ರಚನೆಯಾದರೆ ಅದಕ್ಕೆ ಹೆಚ್ಚಿನ ಬೆಲೆ ಬರುತ್ತದೆ ಮತ್ತು ಅಂತಹ ಕಾವ್ಯ, ಸಾಹಿತ್ಯ ಸಾರ್ವಕಾಲಿಕವಾಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಕವಯತ್ರಿ ಸುರೇಖಾ ಹಿರೆನೂರ್ ಅಭಿಪ್ರಾಯಪಟ್ಟರು.

ನಗರದ ಆದರ್ಶ ನಗರದಲ್ಲಿರುವ ದಿ ರಾಷ್ಟ್ರೀಯ ಕಂಪ್ಯೂಟರ ಸಾಕ್ಷರತಾ ಸಮಿತಿಯ ಎನ್’ಟಿಟಿಸಿ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ವಿಶ್ವ ಕಾವ್ಯ ದಿನಾಚರಣೆ’ಯನ್ನು ತಮ್ಮ ಸ್ವರಚಿತ ಕವಿತೆ ವಾಚಿಸುವ ಮೂಲಕ ಉದ್ಘಾಟಿಸಿ‌ ಮಾತನಾಡಿದ ಅವರು, ಖಡ್ಗಗಿಂತ ಲೇಖನಿ ಹರಿತ ಎಂಬ ಮಾತು ಬರವಣಿಗೆಯ ಮಹತ್ವವನ್ನು ಸಾರುತ್ತದೆ ಎಂದರು.

ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ಕವಿಯಲ್ಲಿ ಅದ್ಭುತವಾದ ಸಮಾಜಮುಖಿ ಚಿಂತನಾ ಶಕ್ತಿಯಿರಬೇಕು. ಉತ್ತಮ ಕವಿತೆಗಳು ಸಮಾಜದ ಪ್ರತಿಬಿಂಬವಾಗಿವೆ. ಇವುಗಳು ವ್ಯಕ್ತಿಯಲ್ಲಿರುವ ಭಾವನೆ, ಸಾಹಿತ್ಯ, ರಸಸ್ವಾದ, ಕಲ್ಪನಾಶಕ್ತಿ, ಆಶಯಭಾವ, ಹಾಡುಗಾರಿಕೆ ಅಂತಹ ಗುಣಗಳನ್ನು ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಕವಿತೆ ರಚಿಸುವ ಬಗೆ ಹೇಳಿಕೊಡಬೇಕು. ಶ್ರೇಷ್ಠ ಕವನಗಳು ವ್ಯಕ್ತಿಗೆ ಆನಂದ, ತೃಪ್ತಿ, ಸೃಜನಶೀಲತೆ, ಉತ್ತಮ ಗಾಯಕರನ್ನಾಗಿಸುತ್ತದೆ. ಆದ್ದರಿಂದ ಕವನಗಳ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಲೇಖಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಬಾಲಮಣಿ ಬಡಿಗೇರ, ಪ್ರಮುಖರಾದ ಕಲ್ಲಪ್ಪ ಆರ್ಯ, ಸಂಜನಾ ಉತ್ತರಕರ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *