ನಿಸ್ವಾರ್ಥ ಸೇವೆಯಿಂದ ಭಗವಂತನ ಅನುಗ್ರಹ: ತೆಂಗಳಿ ಶ್ರೀ

Uncategorized

ಚಿತ್ತಾಪುರ: ಜೀವಿತ ಅವಧಿಯಲ್ಲಿ ಆದರ್ಶ ಬದುಕು ನಡೆಸಿದಾಗ ಜನ್ಮ ಸಾರ್ಥಕವಾಗುತ್ತದೆ. ಆಧ್ಯಾತ್ಮದ ವಿಷಯದಲ್ಲಿ ನಿಸ್ವಾರ್ಥ ಸೇವೆ, ಭಕ್ತಿ ಮತ್ತು ನಿಷ್ಠೆ ಹೊಂದಿದಾಗ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ತೆಂಗಳಿ – ಮಂಗಲಗಿಯ ಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಡಾ. ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು.

ಸಮೀಪದ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಐತಿಹಾಸಿಕ ಪರಂಪರೆಯಲ್ಲಿ ದೇವಸ್ಥಾನ, ಮಠ ಮಂದಿರಗಳಿಗೆ ವಿಶೇಷ ಸ್ಥಾನವಿದೆ. ಆಧ್ಯಾತ್ಮ ಮಾರ್ಗದಲ್ಲಿ ಬದುಕು ಮುನ್ನಡೆಸಬೇಕು ಎಂದರು.

ಭಗವಂತನ ಸತ್ಯ ಸ್ವರೂಪವನ್ನು ಸಮಾಜಕ್ಕೆ ತಿಳಿಸುವಲ್ಲಿ ಧಾರ್ಮಿಕ ಆಚರಣೆಗಳು ಪೂರಕವಾಗಿದೆ. ಮನಸ್ಸು ಶುದ್ಧವಾಗಿರಿಸಿ ದಾನ, ಧರ್ಮ, ಪರೋಪಕಾರದ ಬಗ್ಗೆ ಆಲೋಚನೆ ನಡೆಸಬೇಕು. ಸಾಮೂಹಿಕವಾಗಿ ಧಾರ್ಮಿಕ ಆಚರಣೆಗಳನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸಬೇಕು ಎಂದರು.

ಜೀವನದಲ್ಲಿ ಧರ್ಮದ ತಳಹದಿ ಮೇಲೆ ಕಾರ್ಯಗಳನ್ನು ನಡೆಸಿದಾಗ ನೆಮ್ಮದಿ ಕಾಣಬಹುದು. ಪ್ರತಿಯೊಬ್ಬರು ಧಾರ್ಮಿಕ ಆಚರಣೆ ಮಾಡುವ ಜತೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಧಾರ್ಮಿಕ ಆಚರಣೆಗಳಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದು ಹೇಳಿದರು.

ಪುರಾಣ – ಪ್ರವಚನ ಪ್ರವೀಣ ಉದಯಕುಮಾರ ಶಾಸ್ತ್ರಿ ಪುರಾಣ ಪಠಣ ಮಾಡಿದರು, ಸಂಗೀತ ಗುರುಶಾಂತಯ್ಯ ಸ್ಥಾವರಮಠ, ತಬಲಾ ವೀರಭದ್ರಯ್ಯ ಸ್ಥಾವರಮಠ ಸೇವೆ ಸಲ್ಲಿಸಿದರು.

ಗ್ರಾಮದ ಪ್ರಮುಖ ರಸ್ತೆಯಲ್ಲಿ ಜನ ಜಾಗೃತಿ ಪಾದಯಾತ್ರೆ ಜರುಗಿತು.

ಮುಖಂಡರಾದ ರೇವಶೆಟ್ಟಿ ತುಪ್ಪದ, ಶರಣಪ್ಪ ಕಲಬುರಗಿ, ನಾಗರಾಜ ಮಹಾಗಾಂವ, ಶಾಮರಾವ ಮಾಲಿಪಾಟೀಲ, ಬಸವರಾಜ ಭೈರಿ, ರಾಜಕುಮಾರ ಪಟ್ಟೆದ, ಭೀಮಾಶಂಕರ ಅಂಕಲಗಿ, ಉದಯಕುಮಾರ ಪಟ್ಟೆದ, ಬಸವರಾಜ ಬಸ್ತೆ, ಸಿದ್ದಣ್ಣ ಹೊಸಳ್ಳಿ ಸೇರಿದಂತೆ ತೆಂಗಳಿ ಮತ್ತು ಮಂಗಲಗಿ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *