ಕಲಬುರಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ 6ಕ್ಕೆ ಸಾವಿರಾರು ಭಕ್ತವೃಂದದ ಜೈಘೋಷದೊಂದಿಗೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಶರಣಬಸವೇಶ್ವರ ದೇವಾಲಯ ಸಂಕೀರ್ಣದಲ್ಲಿ ರಥೋತ್ಸವದ ಸಮಯದಲ್ಲಿ ವರ್ಷಕ್ಕೊಮ್ಮೆ ಪ್ರದರ್ಶಿಸಲಾಗುವ ಪ್ರಸಾದ ಬಟ್ಟಲನ್ನು ರಥೋತ್ಸವದ ಆರಂಭವನ್ನು ಸೂಚಿಸಲು 8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಹಾಗೂ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಪ್ರದರ್ಶಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರು ತಮ್ಮ ಹರಕೆ ತೀರಿಸಿದರು. ಜಾತ್ರಾ ಮಹೋತ್ಸವಕ್ಕೆ ನಾಡಿನ ಭಕ್ತರು ಸಾಕ್ಷಿಯಾದರು. ನಸುಕಿನಿಂದಲೇ ಭಕ್ತರ ದಂಡು ದೇವಾಲಯಕ್ಕೆ ಆಗಮಿಸಿ ಸಾಲುಗಟ್ಟಿ ನಿಂತು ಕಾಯಿ ಕರ್ಪೂರ ಅರ್ಪಿಸಿ ನೈವೇದ್ಯ ಸಲ್ಲಿಸಿ ಮಹಾಸಮಾಧಿಯ ದರ್ಶನ ಪಡೆದರು. ಶರಣನ ಮಹಾಸಮಾಧಿ ಪಕ್ಕದಲ್ಲಿಯೇ ಇರುವ ದೊಡ್ಡಪ್ಪ ಅಪ್ಪ ಅವರ ಸಮಾಧಿಯನ್ನೂ ಕಣ್ತುಂಬಿಕೊಂಡರು. ಹರಕೆ ಹೊತ್ತ ಭಕ್ತರು ನಗರದ ವಿವಿಧೆಡೆ ಏರ್ಪಡಿಸಿದ್ದ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಸ್ಥಳಗಳ ಪೈಕಿ ಒಂದಾಗಿರುವ ಶರಣಬಸವೇಶ್ವರ ಸಂಸ್ಥಾನವು ಜಾತ್ರೆಯ ಪ್ರಯುಕ್ತ ಹಲವು ದಿನಗಳಿಂದ ಸಕಲ ಸಿದ್ಧತೆ ಕೈಗೊಂಡಿತ್ತು. ರಥೋತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಉಚಿತ ಆಟೋ ಸೇವೆ
ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಆಟೋ ಚಾಲಕರ ಸಂಘದಿಂದ ಉಚಿತ ಆಟೋ ಸೇವೆ ಒದಗಿಸಲಾಯಿತು.
ಭಕ್ತರಿಗೆ ಪ್ರಸಾದ ವ್ಯವಸ್ಥೆ
ಕಲ್ಯಾಣ ನಾಡಿನ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತರಿಗಾಗಿ ದಾರಿಯುದ್ದಕ್ಕೂ ಪ್ರಸಾದದ ವ್ಯವಸ್ಥೆ ಮಾಡಲಾಯಿತ್ತು. ಪಾದಯಾತ್ರೆ ಮೂಲಕ ಬರುವ ಹಳ್ಳಿಗಳ ಭಕ್ತರಿಗಾಗಿ ಊಟ ಹಾಗೂ ಮಜ್ಜಿಗೆ ವ್ಯವಸ್ಥೆ ಭಕ್ತರು ಮಾಡಿದರು. ದೇವಸ್ಥಾನದಲ್ಲಿಯೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.