ಪಿಡಿಒ ಅಮಾನತಿಗೆ ಪತ್ರಕರ್ತರ ಸಂಘ ಒತ್ತಾಯ‌

ಪಟ್ಟಣ

ಚಿತ್ತಾಪುರ: ಪತ್ರಕರ್ತನ ಮೇಲೆ ಬೆದರಿಕೆ ಹಾಕಿದ ಅಳ್ಳೊಳ್ಳಿ ಗ್ರಾ.ಪಂ ಪಿಡಿಒ ಅವರನ್ನು ಅಮಾನತು ಮಾಡುವಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಒತ್ತಾಯಿಸಿದರು.

ಪಟ್ಟಣದಲ್ಲಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಅಳ್ಳೊಳ್ಳಿ ಗ್ರಾ.ಪಂ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿ ಹಾಗೂ ಖರ್ಚು-ವೆಚ್ಚದ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ ಪತ್ರಕರ್ತನಿಗೆ ಪಿಡಿಒ ಬೆದರಿಕೆ ಹಾಕಿದ್ದಾರೆ. ಗ್ರಾ.ಪಂ ನಲ್ಲಿ ಅವ್ಯವಹಾರ ನಡೆದಿದೆ ಎಂದು ದೂರುಗಳು ಬಂದಿದ್ದು, ಸಮಗ್ರ ಮಾಹಿತಿಯೊಂದಿಗೆ ವರದಿ ಮಾಡುವುದಕ್ಕಾಗಿ ಮಾ.1ರಂದು ಗ್ರಾ.ಪಂ ಕಚೇರಿಯಲ್ಲಿ 15ನೇ ಹಣಕಾಸಿನಲ್ಲಿ 2023-24, 2024-25ನೇ ಸಾಲಿನಲ್ಲಿ ನಡೆದ ಕಾಮಗಾರಿಗಳು, ಖರ್ಚಾದ ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಪತ್ರಕರ್ತ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಮಾ.5 ರಂದು ಮಧ್ಯಾಹ್ನ 1.53ಕ್ಕೆ ಪಿಡಿಒ ಪತ್ರಕರ್ತನಿಗೆ ಕರೆ ಮಾಡಿ ಬೆದರಿಕೆ ಹಾಕಿ ನಿಂದಿಸಿದ್ದಾರೆ. ಈ ಬಗ್ಗೆ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾ.ಪಂ-ಜಿ.ಪಂ ಅಧಿಕಾರಿಗಳಿಗೆ ಪತ್ರಕರ್ತ ದೂರು ನೀಡಿದ್ದಾರೆ. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಬೇರೆ ಗ್ರಾ.ಪಂನಲ್ಲಿ ಕಾರನಿರ್ವಹಿಸಿದ ಕಾಮಗಾರಿಗಳ ಬಗ್ಗೆ ತನಿಖೆ ಮಾಡಬೇಕು. ಕೂಡಲೇ ಸಂಬಂಧಪಟ್ಟ ಪಿಡಿಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಕನಿಷ್ಟ ಸೌಜನ್ಯವಿಲ್ಲದೇ ಮಾತನಾಡಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಚಿತ್ತಾಪುರ ತಾಲೂಕು ಪತ್ರಕರ್ತರ ಸಂಘ ಒತ್ತಾಯಿಸುತ್ತದೆ ಎಂದರು.

ತಹಸೀಲ್ದಾರ್ ನಾಗಯ್ಯ ಹಿರೇಮಠ ಮನವಿ ಪತ್ರ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಈ ವೇಳೆ ಕರ್ನಾಟಕ ಕಾರನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರದರ್ಶಿ ವೀರೇಂದ್ರ ಕುಮಾರ ಕೊಲ್ಲೂರ, ತಾಲೂಕು ಸಂಘದ ಪದಾಧಿಕಾರಿಗಳಾದ ಮಡಿವಾಳಪ್ಪ ಹೇರೂರ, ರಾಯಪ್ಪ ಕೋಟಗಾರ, ಅನಂತನಾಗ ದೇಶಪಾಂಡೆ, ಸಂತೋಷಕುಮಾರ ಕಟ್ಟಿಮನಿ, ದಯಾನಂದ ಖಜೂರಿ, ಅಣ್ಣರಾಯ ಮಾಡಬೂಳಕರ್, ಪೃಥ್ವಿರಾಜ ಸಾಗರ, ಚಂದ್ರಶೇಖರ ಬಳ್ಳಾ, ನಾಗಯ್ಯಸ್ವಾಮಿ ಅಲ್ಲೂರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *