ಗ್ರಾಹಕರು ವ್ಯವಹರಿಸುವಾಗ ಜಾಗೃತಿ ವಹಿಸುವುದು ಅಗತ್ಯ

ಜಿಲ್ಲೆ

ಕಲಬುರಗಿ: ಜನರಲ್ಲಿ ‘ಕೊಳ್ಳುಬಾಕ ಸಂಸ್ಕೃತಿ’ ಹೆಚ್ಚಾಗಿರುವುದುರಿಂದ ಆನ್’ಲೈನ್ ಮತ್ತು ನೇರ ಮಾರಾಟ ಕಂಪನಿಗಳಿಂದ ಗುಣಮಟ್ಟ, ಬೆಲೆ, ಪ್ರಮಾಣ, ಖಾತ್ರಿ, ಪರಿಶುದ್ಧತೆ ಸೇರಿದಂತೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಅನ್ಯಾಯವಾಗುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಗ್ರಾಹಕರು ವ್ಯವಹರಿಸುವಾಗ ಬಹಳಷ್ಟು ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರೇ ಮಾರುಕಟ್ಟೆಯ ಆಧಾರ ಸ್ಥಂಭ. ಗ್ರಾಹಕರಿಗೆ ಅನ್ಯಾಯವಾಗಬಾರದು. ಸರಕು ಮತ್ತು ಸೇವೆಯ ಬಗ್ಗೆ ಸುರಕ್ಷತೆ, ಮಾಹಿತಿ ಪಡೆಯುವದು, ಆಯ್ಕೆ ಮಾಡಿಕೊಳ್ಳುವುದು, ಆಲಿಸುವದು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವುದು, ಗ್ರಾಹಕರ ಶಿಕ್ಷಣ ಪಡೆಯುವುದು ಇವುಗಳು ಗ್ರಾಹಕರ ಹಕ್ಕುಗಳಾಗಿವೆ. ಹಕ್ಕುಗಳ ಬಗ್ಗೆ ಅರಿವು ಅಗತ್ಯ. ಸರಕು-ಸೇವೆಗೆ ಸಂಬಂಧಿಸಿದಂತೆ ಸಮಸ್ಯೆ ಕಂಡುಬಂದರೆ ದೂರು ನೀಡಲು ಸಿದ್ಧರಿರಬೇಕು, ತಪ್ಪು ಜಾಹೀರಾತುಗಳಿಂದ ಮೋಸ ಹೋಗಬಾರದು. ನಗದು ರಶೀದಿ ಪಡೆಯಬೇಕು. ಗ್ರಾಹಕರ ಸಂಘಟನೆಯಾಗಬೇಕು. ಸರಕುಗಳ ಆಯ್ಕೆಯಲ್ಲಿ ಅವಸರ ಬೇಡ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ, ಪ್ರಮುಖರಾದ ಪ್ರಮೋದ ಅಕುಲ್, ನಂದೀಶ್ ಮರಡಿ, ಲತಾ, ಸೋನಾಲಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *