ಕಲಬುರಗಿ: ಪತ್ರಿಕೆಗಳು ಸಮಾಜಮುಖಿ, ಅಭಿವೃದ್ಧಿ, ವೈಚಾರಿಕತೆ, ಮೌಲ್ಯಯುತ, ಧನಾತ್ಮಕ ವಿಷಯದ ಬಗ್ಗೆ ಸುದ್ದಿ ಬಿತ್ತರಿಸಿದರೆ ಮಾತ್ರ ಸಾಮಾಜಿಕ ಸ್ವಾಸ್ಥ್ಯಕಾಪಾಡಲು ಸಾಧ್ಯವಾಗುತ್ತದೆ. ಇಂತಹ ಗುರುತರ ಜವಾಬ್ದಾರಿ ಪತ್ರಿಕೆ, ಪತ್ರಕರ್ತರ ಮೇಲಿದೆ ಎಂದು ಹಿರಿಯ ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಅಭಿಮತಪಟ್ಟರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿಪೂರ್ವ ಕಾಲೇಜ್’ನ ಎನ್.ಎಸ್.ಎಸ್ ಘಟಕದ ವತಿಯಿಂದ ಜರುಗುತ್ತಿರುವ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನವಾದ ಬುಧವಾರ ಶಕಾಪೂರ ಗ್ರಾಮದ ವಿಶ್ವರಾಧ್ಯ ತಪೋವನ ಮಠದ ಆವರಣದಲ್ಲಿ ಏರ್ಪಡಿಸಿದ್ದ ‘ಸಾಮಾಜಿಕ ಸ್ವಾಸ್ಥ್ಯಕಾಪಾಡುವಲ್ಲಿ ಪತ್ರಿಕಾ ರಂಗದ ಪಾತ್ರ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಪತ್ರಿಕಾ ರಂಗ ಇಂದು ಪತ್ರಿಕಾ ಉದ್ಯಮವಾಗಿ ಪರಿಣಮಿಸಿದ ಪ್ರಯುಕ್ತ ಲಾಭದತ್ತ ಮುಖ ಮಾಡಿ ಅನಾವಶ್ಯಕ, ಅಪ್ರಸ್ತುತ, ಅಪರಾದ, ಸಮಾಜಕ್ಕೆ ಹಾನಿಯಾಗುವ ಸುದ್ದಿಗಳ ವೈಭವೀಕರಣ ಜರುಗುತ್ತಿರುವುದು ವಿಷಾದನೀಯ ಎಂದರು. .
ಸಾನಿಧ್ಯ ವಹಿಸಿದ್ದ ಡಾ.ಸಿದ್ದರಾಮ ಶಿವಾಚಾರ್ಯ ಮಾತನಾಡಿ, ಸಮಾಜದಲ್ಲಿ ಅನೇಕ ನೈಜ ಸಾಧಕರಿದ್ದು, ಅವರನ್ನು ಗುರುತಿಸಿ, ಸಮಾಜಕ್ಕೆ ಪರಿಚಯಿಸಿ, ಅವರ ಸೇವೆಯನ್ನು ದೇಶದ ಒಳಿತಿಗೆ ಸದುಪಯೋಗವಾಗುವಂತೆ ಪತ್ರಿಕೆಗಳು ಕಾರ್ಯನಿರ್ವಹಿಸಬೇಕು. ಜನರಲ್ಲಿ ಸೇವಾ ಮನೋಭಾವನೆ ಬೆಳೆಯಬೇಕು. ಸರ್ಕಾರದ ಯಾವುದೆ ಯೋಜನೆ ಸೂಕ್ತ ಫಲಾನುಭವಿಗೆ ದೊರಕಬೇಕು. ರೈತನ ಬದುಕು ಹಸನಾಗಬೇಕು. ಭ್ರಷ್ಟಾಚಾರ ನಿರ್ಮೂಲನೆಯಾಗಲಿ. ಸಮಾಜದಲ್ಲಿ ಸಂಸ್ಕಾರ, ಒಳ್ಳೆಯತನ ಬಿತ್ತುವ ಕಾರ್ಯ ಪತ್ರಿಕೆಗಳಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜರುಗಬೇಕಾಗಿದೆ ಎಂದು ಆಶಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶರಣಪ್ಪ ಸೈದಾಪೂರ ಮಾತನಾಡಿದರು.
ಕರಾಸನೌ ಸಂಘದ ತಾಲೂಕಾ ಘಟಕದ ನಿರ್ದೇಶಕ ಲಿಂಗರಾಜ ಹಿರೇಗೌಡ, ಕಲಬುರಗಿಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಸುನೀಲ ರಾಠೋಡ, ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಬಿರಾರ್ಥಿ ಶಾರದಾ ಪ್ರಾರ್ಥಿಸಿದರು, ಹುಲೆಪ್ಪ ನಿರೂಪಿಸಿ, ವಂದಿಸಿದನು.
ಶಿಬಿರಾರ್ಥಿಗಳು ಮಠ ಹಾಗೂ ಸುತ್ತಲಿನ ಪ್ರದೇಶವನ್ನು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ಮಾಡಿದರು.