ಕಲಬುರಗಿ: ವಯಸ್ಸಿಗೆ ತಕ್ಕಂತೆ ಗಾಡವಾದ ನಿದ್ರೆಯನ್ನು ಮಾಡಿದರೆ ಆರೋಗ್ಯಯುತವಾಗಿರಲು ಸಾಧ್ಯ ಎಂದು ಚಿಂತಕ ಸಿದ್ದಾರೂಡ ಬಿರಾದಾರ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ನಿದ್ರಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒತ್ತಡದ ಬದುಕಿನಲ್ಲಿ ಸರಿಯಾಗಿ ಊಟ ಮತ್ತು ನಿದ್ರೆ ಮಾಡಲು ಸಮಯ ಸಿಗದಂತಾಗಿ, ಚಿಕ್ಕ ವಯಸಿನಲ್ಲಿಯೇ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಘಾತದಂತದ ರೋಗಗಳಿಗೆ ತುತ್ತಾಗಿ ಅಮೂಲ್ಯವಾದ ಜೀವನ ಕಳೆದುಕೊಳ್ಳುವ ಸ್ಥಿತಿ ಉಂಟಾಗಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಆಗತಾನೆ ಜನಿಸಿದ ಮಗುವಿನಿಂದ 6 ತಿಂಗಳ ಮಗುವಿನವರೆಗೂ ದಿನಕ್ಕೆ 14-16 ಗಂಟೆಗಳು, 6 ತಿಂಗಳುಗಳಿಂದ 1 ವರ್ಷದ ಮಗುವಿಗೆ 12-14 ಗಂಟೆ, 1 ವರ್ಷದಿಂದ 2 ವರ್ಷದವರೆಗಿನ ಮಗುವಿಗೆ 11-14 ಗಂಟೆ, 3-5 ವರ್ಷಗಳ ಮಗುವಿಗೆ 10-13 ಗಂಟೆಗಳು, 6-13 ವರ್ಷದ ಮಕ್ಕಳಿಗೆ 9-11 ಗಂಟೆ, 14-17 ವರ್ಷದ ವಯಸ್ಕರಿಗೆ 8-10 ಗಂಟೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ 7-8 ಗಂಟೆಗಳ ಕಾಲ ಗಾಡವಾದ ನಿದ್ರೆಯ ಅಗತ್ಯವಿದೆ ಎಂಬ ಮಾತು ವೈದ್ಯಲೋಕ ಹೇಳಿದೆ ಎಂದರು.
ದೇವರು ನೀಡಿರುವ ನಿದ್ರೆ ಅಮೂಲ್ಯವಾದ ಕೊಡುಗೆ. ದಿನಪೂರ್ತಿ ದುಡಿದ ದೇಹಕ್ಕೆ ವಿಶ್ರಾಂತಿ ಅಗತ್ಯ. ಇದರಿಂದ ದೇಹ ಪುನರ್ ಚೈತನ್ಯ ಪಡೆಯುತ್ತದೆ. ಆದರೆ ಈಗಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಹಗಲು ಮತ್ತು ರಾತ್ರಿಯೆನ್ನದೆ ನಿರಂತರವಾಗಿ ದುಡಿಯುವ ಮೂಲಕ ದೇಹ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದೆ. ಸೂಕ್ತ ನಿದ್ರೆಯ ಕೊರತೆಯಿಂದ ಲವಲವಿಕೆ ಮಾಯವಾಗುವುದು, ನಿಶ್ಯಕ್ತತತೆ, ಏಕಾಗ್ರತೆ ಕೊರತೆ, ತಲೆನೋವು, ಕೆಲಸದ ಸಾಮರ್ಥ್ಯ ಕ್ಷೀಣಿಸುವುದು, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳು ಬೇಗನೆ ದೇಹ ಪ್ರವೇಶ ಪಡೆಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಮಹಾದೇವಪ್ಪ ಎಚ್.ಬಿರಾದಾರ, ಓಂಕಾರ ವಠಾರ, ಬಸವರಾಜ ಎಸ್.ಪುರಾಣೆ ಸೇರಿದಂತೆ ಅನೇಕರು ಇದ್ದರು.