ದುಷ್ಟತೆ ನಾಶದ ಮೇರು ಸಂದೇಶದ ಹೋಳಿ: ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಸಂಸ್ಕೃತ ಶಬ್ದವಾದ ‘ಹೋಳಿ’ ಎಂದರೆ ‘ಸುಡು’ ಎಂದರ್ಥ. ಅಂದರೆ ಮನುಷ್ಯನಲ್ಲಿ ಅಡಗಿರುವ ಕಾಮ, ಕ್ರೋದ, ಮದ, ಮೋಹ, ಮತ್ಸರದಂತಹ ಅರಿಷಡ್ವರ್ಗಗಳು, ಕೆಟ್ಟ ಗುಣಗಳನ್ನು ನಾಶಪಡಿಸಿ, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಪರಸ್ಪರ ಶಾಂತಿ, ಸೌಹಾರ್ದತೆಯ ಜೀವನ ಸಾಗಿಸಬೇಕೆಂಬ ಮೇರು ಸಂದೇಶವನ್ನು ಹೋಳಿ ಹಬ್ಬ ಹೊಂದಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.

ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ‘ಹೋಳಿ ಹಬ್ಬದ ಸಂದೇಶ ವಿಶೇಷ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳಲ್ಲಿ ರಾಸಾಯನಿಕಗಳು ಬೆರೆಸಲಾಗುತ್ತಿದೆ. ಇದು ಚರ್ಮ, ಕಣ್ಣು, ಕಿವಿ, ದೇಹಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಒತ್ತಾಯಪೂರ್ವಕವಾಗಿ ಮತ್ತೊಬ್ಬರಿಗೆ ಬಣ್ಣ ಎರಚುವುದು, ಹಬ್ಬದ ಹೆಸರಿನಲ್ಲಿ ಚಂದಾ ವಸೂಲಿ ಮಾಡಲು ರಸ್ತೆ ಮೇಲೆ ತೊಂದರೆ ನೀಡುವುದು, ಕೆಟ್ಟ ಶಬ್ದಗಳನ್ನು ಬಳಸುವದು, ಬೈಯ್ದಾಟ, ಹೊಡೆದಾಟ, ಪುಂಡಾಟಿಕೆ ಪ್ರದರ್ಶನ, ಕಂಠಪೂರ್ತಿ ಕುಡಿದು ಅತ್ಯಂತ ವೇಗವಾಗಿ ಬೈಕ್, ವಾಹನಗಳನ್ನು ಚಲಿಸಿ ಅಪಘಾತಕ್ಕೀಡಾಗುವುದು, ಜಗಳವಾಡುವಂತಹ ಕೃತ್ಯಗಳು ನಿಲ್ಲಬೇಕಾಗಿದೆ ಎಂದು ನುಡಿದರು.

ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ದುಷ್ಟ ಶಕ್ತಿಗಳನ್ನು ನಾಶಪಡಿಸಿ, ಶಿಷ್ಟತೆಯನ್ನು ಕಾಪಾಡಿಕೊಂಡು ಹೋಗುವ, ಪರಸ್ಪರ ಪ್ರೀತಿ, ಶಾಂತಿ, ಸೌಹಾರ್ಧತೆ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕೆಂಬ ಸಂದೇಶವನ್ನು ನೀಡುವ ಈ ಹಬ್ಬದ ಎಲ್ಲಾ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಶಾಂತಿಯಿಂದ ಹೋಳಿ ಹಬ್ಬವನ್ನು ಆಚರಿಸುವ ಮೂಲಕ ಹಬ್ಬದ ಪಾವಿತ್ರ್ಯತೆ ಉಳಿಸುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ, ಶಿಕ್ಷಕಿ ಸೋನಿಯಾ ಸರಡಗಿ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *