ಕಲಬುರಗಿ: ವಿದೇಶ ಫಾಸ್ಟ್, ಜಂಕ್ ಪುಢ್ ಆಹಾರ ಸೇವನೆ ಮಾಡದೆ, ದೇಶಿಯ ಸಾವಯುವ ಆಹಾರ, ಸಿರಿಧಾನ್ಯಗಳ ಆಹಾರ ಉಪಯೋಗಿಸಬೇಕು. ದೇಶಿಯ ಆಹಾರದಲ್ಲಿದೆ ನಮ್ಮ ಆರೋಗ್ಯದ ಗುಟ್ಟು ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ ನಿಂಗಪ್ಪ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ಅವರ ಹೊಲದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಕನ್ನಡ ಜಾನಪದ ಪರಿಷತ್ ಇವುಗಳ ವತಿಯಿಂದ ಬುಧವಾರ ಜರುಗಿದ ‘ಸಿಹಿತೆನೆ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ಕಷ್ಟಪಟ್ಟು ಬೆವರು ಸುರಿಸಿ ದುಡಿದು ಕೃಷಿ ಕಾಯಕ ಮಾಡುತ್ತಿದ್ದರು. ಅವರಿಗೆ ಆಹಾರ ಸಂಸ್ಕೃತಿಯ ಬಗ್ಗೆ ಅಪಾರವಾದ ಜ್ಞಾನವಿತ್ತು. ರಾಸಾಯನಿಕ ವಿಷಮುಕ್ತ ಆಹಾರ ಸೇವೆನ, ಕೆಲಸ ಮಾಡುವುದರಿಂದ ಅವರ ದೇಹ ಗಟ್ಟಿಮುಟ್ಟಾಗಿ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದರು.
ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅಶೋಕ ಕಾಳೆ ಮಾತನಾಡಿ, ರೈತ ದೇಶದ ಬೆನ್ನೆಲುಬು, ಸಮಾಜಕ್ಕೆ ಅನ್ನವನ್ನು ನೀಡಿ ಎಲ್ಲರನ್ನು ಬದುಕಿಸುವ ಅನ್ನದಾತ. ನಗರೀಕರಣ ಮತ್ತು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ದೇಶದ ಮೂಲ ಕಸಬಾದ ಕೃಷಿ ಕಾಯಕದಿಂದ ದೂರ ಸರಿಯುವುದು ಬೇಡ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ ಪಾಟೀಲ, ತಾನು ಕಷ್ಟಪಟ್ಟು ದುಡಿದು ಅದರ ಫಲ ಕೇವಲ ತಾನಷ್ಟೇ ಅಲ್ಲದೆ, ಸಮಾಜದೊಂದಿಗೆ ವಿನಿಯೋಗ ಮಾಡುವ ಕೃಷಿ ಸಂಸ್ಕೃತಿ ಮತ್ತು ರೈತನೇ ದೊಡ್ಡ ದಾಸೋಹಿ. ಜೋಳ ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾಗಿದೆ. ರೈತರು ವಾಣಿಜ್ಯ ಬೆಳೆಗಳತ್ತ ಮುಖಮಾಡಿದ್ದರಿಂದ ಜೋಳದ ಉತ್ಪಾದನೆ ಕಡಿಮೆಯಾಗುತ್ತಿದೆ. ಇದರಿಂದ ಆಹಾರ, ದನ-ಕರುಗಳಿಗೆ ಮೇವಿನ ಕೊರೆತೆ ಕಂಡುಬರುತ್ತಿದೆ. ಸಿಹಿತೆನೆಯಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿದ್ದು ಅದರ ಸೇವನೆ ಅಗತ್ಯವಾಗಿದೆ. ಸಹಿತೆನೆ ಸೇವನೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ಹಾಗೂ ಸುಷ್ಮಾ ಕೆ.ಚೇಂಗಟಿ ದಂಪತಿಯನ್ನು ಗೌರವಿಸಲಾಯಿತು. ಕೃಷಿ ಸೊಗಡಿನ ಗೀತಗಾಯನ ಜರುಗಿತು.
ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ರೈತರಾದ ತಿಪ್ಪಣ್ಣ ಚೇಂಗಟಿ, ಶಿವಲಿಂಗಪ್ಪ ಟಿ., ಪ್ರಕಾಶ್, ಕವಿತಾ, ಶಿವಶಂಕರ, ನಿತ್ಯಾನಂದ ಸಜ್ಜನ್, ಸಾನವಿ ಎಸ್.ವಂಟಿ ಸೇರಿದಂತೆ ಅನೇಕರು ಇದ್ದರು.