ಹರ್ಡೇಕರ ಮಂಜಪ್ಪನವರ ಸಾಮಾಜಿಕ ಕೊಡುಗೆ ಅನನ್ಯ

ಜಿಲ್ಲೆ

ಕಲಬುರಗಿ: ಮಹಾತ್ಮ ಗಾಂಧಿಜಿಯವರ ಸತ್ಯ, ಶಾಂತಿ, ಅಹಿಂಸೆ, ನ್ಯಾಯ, ಸಮಾನತೆ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವುಗಳನ್ನು ಪಸರಿಸುವ ಕಾರ್ಯ ಮಾಡಿರುವ ಹರ್ಡೇಕರ ಮಂಜಪ್ಪನವರು ಕರ್ನಾಟಕದ ಗಾಂಧಿಜಿಯಾಗಿದ್ದಾರೆ. ಅವರ ಸಾಮಾಜಿಕ ಕೊಡುಗೆ ಅನನ್ಯವಾಗಿದೆ ಎಂದು ಪೂಜ್ಯ ಶಿವಾನಂದ ಶ್ರೀಗಳು ಅಭಿಮತಪಟ್ಟರು.

ನಗರದ ಮಕ್ತಂಪುರ ಗುರುಬಸವ ಮಠದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ‘ಶರಣ ಹರ್ಡೇಕರ ಮಂಜಪ್ಪನವರ 139ನೇ ಜನ್ಮದಿನೋತ್ಸವ’ ನಿಮಿತ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಮಂಜಪ್ಪನವರು ಗಾಂಧಿಯವರ ಅನುಯಾಯಿಯಾಗಿ ಕರ್ನಾಟಕದಲ್ಲಿ ಅವರ ತತ್ವಗಳನ್ನು ಜಾರಿಗೊಳಿಸಲು ಶ್ರಮಿಸಿದ್ದಾರೆ. ಶರಣ ಜೀವಿ, ಸಮಾಜ ಸುಧಾರಕ, ಸ್ವಾತಂತ್ರ ಹೋರಾಟಗಾರರಾಗಿ ಸೇವೆ ಸಲ್ಲಿಸಿದ್ದಾರೆ.ಇಂತಹ ಮಹನೀಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಮಂಜಪ್ಪನವರ ಕೊಡುಗೆ ಪಠ್ಯದಲ್ಲಿ ಸೇರ್ಪಡೆಗೊಳಿಸಿ, ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯವಾಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಬಳಗದ ಅಧ್ಯಕ್ಷ, ಶರಣ ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಮಂಜಪ್ಪ ಅವರು ಶರಣ ತತ್ವ ಅನುಷ್ಠಾನಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದರು. ಜಾತಿ ಪದ್ಧತಿಯ ನಾಶ, ಮೂಢನಂಬಿಕೆ, ಅಂಧಶೃದ್ಧೆಯ ನಿರ್ಮೂಲನೆಯಂತಹ ಅನೇಕ ಸಾಮಾಜಿಕ ಸುಧಾರಣೆ ತರಲು ಪ್ರಯತ್ನಿಸಿದರು. ಪ್ರಥಮ ಬಾರಿಗೆ ಬಸವ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದರು ಎಂದು ಅವರ ಜೀವನ, ಕೊಡುಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಮಲ್ಲಿಕಾರ್ಜುನ ಕಾಖಂಡಕಿ ಹಾಗೂ ಮಠದ ಭಕ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *