ಕಲಬುರಗಿ: ರಾಷ್ಟ್ರದ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ತರವಾಗಿದೆ. ಯುವಕರು ವಿಶ್ವದ ಭವಿಷ್ಯ, ದೇಶದ ಪ್ರಗತಿಗೆ ಯುವಶಕ್ತಿ ಬಳಸಿಕೊಳ್ಳಬೇಕು ಎಂದು ಉಪನ್ಯಾಸಕ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ ಹೇಳಿದರು.
ಜೇವರ್ಗಿ ಪಟ್ಟಣದ ಕೋರ್ಟ್ ಸಮೀಪದ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಯುವ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಯುವಕರ ಪಾತ್ರ ಮುಖ್ಯವೆಂದು ಸಾರಲು ಈ ದಿನಾಚರಣೆ ಪೂರಕವಾಗಿದೆ. ಯುವಕರನ್ನು ಒಗ್ಗೂಡಿಸುವುದು, ಸಾಮಾಜಿಕ-ಆರ್ಥಿಕ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಅವರ ಕೊಡುಗೆಯನ್ನು ಗುರುತಿಸುವುದು, ಎಲ್ಲಾ ಕ್ಷೇತ್ರದಲ್ಲೂ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸಿ, ಪ್ರೋತ್ಸಾಹಿಸಿದರೆ ಯುವಕರು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಜಗನಾಥ ಕಾವಳೆ ಮಾತನಾಡಿ, ಪ್ರಪಂಚದಾದ್ಯಂತ ಯುವಕರು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುಬೇಕು. ಯುವಕರನ್ನು ಸಬಲೀಕರಣಗೊಳಿಸಬೇಕು. ದೇಶದ ಜನಸಂಖ್ಯೆಯಲ್ಲಿ ಬಹುಪಾಲು ಯುವಕರಿದ್ದರೆ, ಆ ದೇಶದ ಅಭಿವೃದ್ಧಿ ಅತ್ಯಂತ ವೇಗವಾಗಿ ಸಾಗುತ್ತದೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯುವ ಹೋರಾಟಗಾರರ ಪಾತ್ರ ಅವಿಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯಡ್ರಾಮಿ ಕದಂಬ ಪಿಯು ಕಾಲೇಜಿನ ಪ್ರಾಚಾರ್ಯ ದೇವಿಂದ್ರ ಬಿ.ಗುಡುರ್, ಶಾಲೆಯ ಶಿಕ್ಷಕರಾದ ಕೊತ್ಲಪ್ಪ ಚವಾರ್, ಶ್ರೀಶೈಲ ಮೈದರ್ಗಿ, ನಿಂಗಣ್ಣ ಪೂಜಾರಿ, ಮಲ್ಲಿಕಾರ್ಜುನ ಶಿರೊಳ್ಳಿ, ಶರಣಗೌಡ ಬಿರಾದಾರ, ರಮೇಶ್ ಬಿರಾದಾರ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.