ಚಿತ್ತಾಪುರ: ಯಲ್ಲಮ್ಮ ದೇವಸ್ಥಾನದ ಬೀಗದ ಕೈ ಮುರಿದು ದೇವಿಯ ಬೆಳ್ಳಿ ಮೂರ್ತಿಯ 2 ಕೈಗಳನ್ನು ತುಂಡು ಮಾಡಿ ತೆಗೆದುಕೊಂಡು ಹೋದ ಘಟನೆ ಪಟ್ಟಣದ ಬಾಹರಪೇಟ್ ಸಮೀಪ ಕೊತಲಾಪೂರ ಯಲ್ಲಮ್ಮ ದೇವಸ್ಥಾನದಲ್ಲಿ ನಡೆದಿದೆ.
ನವರಾತ್ರಿ ನಿಮಿತ್ಯ ದೇವಸ್ಥಾನಕ್ಕೆ ಸುಣ್ಣ-ಬಣ್ಣ ಮಾಡಿ ಅಲಂಕಾರ ಕಾರ್ಯ ನಡೆಯುತ್ತಿತ್ತು. ಸೆ.16 ರಂದು ಮಂಗಳವಾರ ಕೊನೆಯ ಹಂತಕ್ಕೆ ತಲುಪಿತ್ತು. ಉಳಿದ ಕಾರ್ಯ ನಾಳೆ ಮಾಡಿದರಾಯಿತು ಎಂದು ದೇವಸ್ಥಾನದ ಗೇಟ್’ಗೆ ಬೀಗ ಹಾಕಿ ಹೋಗಲಾಗಿತ್ತು.
ಸೆ.17 ರಂದು ಬುಧವಾರ ಬೆಳಗ್ಗೆ ದೇವಿಯ ಪೂಜಾ ಕಾರ್ಯಕ್ಕೆ ಅರ್ಚಕ ಮಂಜುನಾಥ ಜೀರ್ ಆಗಮಿಸಿದಾಗ ದೇವಸ್ಥಾನದ ಗೇಟ್ ಮುರಿದು ಒಳ ನುಗ್ಗಿ ದೇವಸ್ಥಾನದ ಒಳಗಿರುವ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ತುಂಡು ಮಾಡಿ ಕಳ್ಳತನ ಮಾಡಿರುವುದು ಕಂಡುಬಂದಿತು.
ಬೆಳ್ಳಿಯ ಕಣ್ಣು ಬಿಟ್ಟು, ಪಾದುಕೆ, ತಾಟ್ ಸಹ ಕಳ್ಳತನವಾಗಿದೆ. ಅಷ್ಟೆ ಅಲ್ಲದೆ ಮೂರ್ತಿಯ ಕಳ್ಳತನ ಮಾಡುವ ಪ್ರಯತ್ನ ನಡೆದಿತ್ತು ಎಂದು ತಿಳಿದು ಬಂದಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ರವಿಕುಮಾರ, ಬಸವರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಾರ್ಯ ಮುಂದುವರೆಸಿದ್ದಾರೆ.