ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಯ ಚರ್ಚೆಗಳು ಹೆಚ್ಚುತ್ತಲೇ ಇದೆ. ಇತ್ತೀಚೆಗೆ ನ್ಯಾಷನಲ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ ಅವರು, ಅಧಿಕಾರ ಹಂಚಿಕೆಯ ಕುರಿತು ಮಾತನಾಡಿದ್ದರು ಹಾಗಾಗಿ ಸಿಎಂ ಸಿದ್ದರಾಮಯ್ಯ ಬದಲಾಗಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿತ್ತು.
ಇದೀಗ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸದ್ಯಕ್ಕೆ ಚುನಾವಣೆ ರಾಜಕೀಯಕ್ಕೆ ನಿವೃತ್ತಿಯ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ಸಿದ್ದಾಮಯ್ಯ ಟಾಂಗ್ ನೀಡಿದ್ದಾರೆ.
ಜನರ ಪ್ರೀತಿ ವಿಶ್ವಾಸ ಇರುವುದರಿಂದ ಯೋಚಿಸುತ್ತೆನೆ
ಚುನಾವಣಾ ರಾಜಕೀಯ ನಿವೃತ್ತಿ ವಿಚಾರವಾಗಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣೆ ರಾಜಕೀಯ ಸ್ವಲ್ಪ ಮಟ್ಟಿಗೆ ಸಾಕು ಎನಿಸುತ್ತಿದೆ. ಆದರೆ, ಜನರ ಪ್ರೀತಿ-ವಿಶ್ವಾಸ ಇರುವುದರಿಂದ ಮುಂದುವರಿಯಬೇಕೋ ಅಥವಾ ಬೇಡವೋ ಎಂಬುದನ್ನು ಜನರ ಅಭಿಪ್ರಾಯ ಪಡೆದು ತೀರ್ಮಾನಿಸುತ್ತೇನೆ.
ಹಿತೈಷಿಗಳು ರಾಜಕೀಯದಲ್ಲಿ ಮುಂದುವರೆಯಬೇಕು ಎನ್ನುತ್ತಿದ್ದಾರೆ
ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ನಿಲ್ಲಬಾರದು ಅಂತ ಮಾನಸಿಕವಾಗಿ ಸಿದ್ಧನಾಗಿದ್ದೆನೆ. ಆದರೆ ಜನರು, ಹಿತೈಶಿಗಳು ಮತ್ತು ಸ್ನೇಹಿತರು ರಾಜಕೀಯದಲ್ಲಿ ಮುಂದುವರಿಯಬೇಕು ಅಂತಾ ಒತ್ತಡ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಕೂಡ ಜನರು ನಮಗೆ ಅಧಿಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರಲು ಜನರ ಆಶೀರ್ವಾದ ಮುಖ್ಯ
ಅಧಿಕಾರಕ್ಕೆ ಬರಲು ಜನರ ಆಶೀರ್ವಾದ ಮುಖ್ಯ, ಜನರ ಆಶಿರ್ವಾದ ಇಲ್ಲದೆ ಅಧಿಕಾರ ಸಾಧ್ಯವಿಲ್ಲ. ಇದಾದ ಬಳಿಕ ಮುಖ್ಯಮಂತ್ರಿಯಾಗಬೇಕೆಂದರೆ ಶಾಸಕರ ಹಾಗೂ ಹೈಕಮಾಂಡ್ ಬೆಂಬಲ ಪಡೆಯುವುದು ಕೂಡ ತುಂಬಾ ಮುಖ್ಯ ಎಂದರು. ಇನ್ನೂ ಎರಡನೇ ಅವಧಿಗೂ ತಾವೇ ಸಿಎಂ ಆಗಿ ಮುಂದುವರೆದಿರುವುದು ಸಂತಸ ತಂದಿದೆ ಎಂದರು.
ಮುಡಾ ಕೇಸ್‌ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು
ಇದೆ ಸಂದರ್ಭದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಾನು ದಾಖಲೆಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆನೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಮಾಡಿದ್ದಿನಿ. ದಾಖಲೆ ಮಾಡುವ ನಂಬಿಕೆ, ವಿಶ್ವಾಸ ನನಗೆ ಇದೆ. ಮುಡಾ ಕೇಸ್‌ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು. ಬೇಕು ಅಂತಲೇ ರಾಜಕೀಯ ಮಾಡಿದ್ದರು. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.