ಹಿಂದಿ ಕಲಿಯಲು ಮುಂದಾಗಿರುವ ಎಚ್.ಡಿ ಕುಮಾರಸ್ವಾಮಿ: ದಿನಾಲೂ 90 ನಿಮಿಷ ಆನ್‌ಲೈನ್‌ ಪಾಠ

ಇತ್ತೀಚಿನ

ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇನ್ನುಮುಂದೆ ಸಚಿವರು ಹಿಂದಿ ಕಲಿಯುವ ನಿರ್ಧಾರ ಮಾಡಿದ್ದಾರೆ.

ಅವರು ವಾರಾಂತ್ಯದಲ್ಲಿ ಬಿಟ್ಟು ದಿನಾಲೂ 90 ನಿಮಿಷಗಳ ಕಾಲ ಹಿಂದಿ ಕಲಿಕೆಯಲು ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರು ಇನ್ನುಮುಂದೆ ಆನ್‌ಲೈನ್‌ ಮೂಲಕ ಹಿಂದಿ ಕಲಿಯಲಿದ್ದಾರೆ.

ಹಿಂದಿ ಕಲಿಕೆಗಾಗಿ ಬೋಧಕರನ್ನು ನೇಮಿಸಿಕೊಂಡಿದ್ದು, ಹಿಂದಿ ಬರವಣಿಗೆ ಹಾಗೂ ಸುಲಭವಾಗಿ ಹಿಂದಿಯಲ್ಲಿ ಮಾತನಾಡುವುದನ್ನು ಅವರು ಹೇಳಿಕೊಡಲಿದ್ದಾರೆ. ಲೋಕ ಸಭೆಯಲ್ಲಿ ಹಿಂದಿಯಲ್ಲಿ ಮಾತನಾಡಲು ಹಾಗೂ ತಮ್ಮ ವಿಚಾರಗಳನ್ನು ಮಂಡಿಸಲು ಕಷ್ಟವಾಗುತ್ತಿರುವುದರಿಂದ ಕುಮಾರಸ್ವಾಮಿಯವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಹಿಂದಿ ಕಲಿಕೆಯ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಮಾತನಾಡಿ, ಉತ್ತರ ಭಾರತದಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಾರೆ, ಹೆಚ್ಚಿನ ಸಂಸದರು ಹಿಂದಿಯಲ್ಲಿ ಮಾತನಾಡುತ್ತಾರೆ. ನನ್ನ ಸಚಿವಾಲಯದ ಎಲ್ಲಾ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡುತ್ತಾರೆ. ಹೀಗಾಗಿ ಹಿಂದಿ ಕಲಿಕೆ ನನಗೆ ಅನಿವಾರ್ಯವಾಗಿದೆ, ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಲೋಕಸಭೆಯ ಸದಸ್ಯರಾಗುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಕೂಡ ಎರಡು ಬಾರಿ ಸಂಸತ್ ಸದಸ್ಯರಾಗಿದ್ದರು. ಈ ಬಾರಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡ ನಂತರ ಮೊದಲ ಬಾರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ.

ಈಶಾನ್ಯ ರಾಜ್ಯಕ್ಕೆ ತೆರಳಿದ್ದಾಗಿನ ಘಟನೆಯ ಬಗ್ಗೆ ಪ್ರಸ್ತಾಪಿಸಿದ ಎಚ್‌ಡಿಕೆ, ಇತ್ತೀಚೆಗೆ ನಾನು ನಾಗಾಲ್ಯಾಂಡ್‌ಗೆ ತೆರಳಿದ್ದೆ, ಅಲ್ಲಿ ನನಗೆ ಇಂಗ್ಲೀಷ್‌ ಮಾತನಾಡುವ ಜನರಿಗಿಂತ ಹೆಚ್ಚು ಹಿಂದಿ ಮಾತನಾಡುವ ಜನರು ಸಿಕ್ಕಿದ್ದರು. ಜಾರ್ಖಂಡ್‌ನಲ್ಲಿಯೂ ಅದೇ ಘಟನೆ ಸಂಭವಿಸಿತ್ತು. ಆದ್ದರಿಂದ ದೈನಂದಿನ ಕಲಿಕೆ ಸಹಾಯಕಾರಿಯಾಗಲಿದೆ ಎಂದು ಹೇಳಿದ್ದಾರೆ.

1996 ರಲ್ಲಿ ಪ್ರಧಾನಿಯಾಗಿದ್ದ ಎಚ್‌ಡಿ ದೇವೇಗೌಡ ಅವರಿಗೂ ಹಿಂದಿ ಭಾಷೆಯ ಸಮಸ್ಯೆ ಕಾಡಿತ್ತು. ಲೋಕಸಭೆಯಲ್ಲಿ ಮಾತನಾಡುವಾಗ ಅವರು ಭಾಷೆಯ ಸಮಸ್ಯೆ ಎದುರಿಸುತ್ತಿದ್ದರು. ನಂತರ ಕೆಲವೇ ತಿಂಗಳಲ್ಲಿ ಹಿಂದಿ ಕಲಿತು ನಿರರ್ಗಳವಾಗಿ ಮಾತನಾಡಲು ಪ್ರಾರಂಭಿಸಿದ್ದರು.

ತಮಿಳುನಾಡು, ಕರ್ನಾಟಕ ಮತ್ತು ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಹಿಂದಿ ಹೇರಿಕೆಯ ಆರೋಪವನ್ನು ನಿರಂತರವಾಗಿ ಮಾಡುತ್ತಾ ಬಂದಿವೆ. ಕೆ. ಕನಿಮೋಳಿ ಅವರಂತಹ ತಮಿಳುನಾಡು ಸಂಸತ್ ಸದಸ್ಯರು ತಮ್ಮ ಭಾಷಣಗಳ ಸಮಯದಲ್ಲಿ ತಮಿಳಿನಲ್ಲಿ ಮಾತ್ರ ಮಾತನಾಡುತ್ತಾರೆ ಮತ್ತು ಬಂಗಾಳದ ತೃಣಮೂಲ ಕಾಂಗ್ರೆಸ್‌ ನಾಯಕರು ಬಂಗಾಳಿಯಲ್ಲಿ ಮಾತನಾಡುತ್ತಾರೆ. ಇಂತಹ ಸಮಯದಲ್ಲಿ ಕೇಂದ್ರ ಸಚಿವರಿಂದ ಈ ಮಾತು ಕೇಳಿ ಬಂದಿದೆ.

ಕುಮಾರಸ್ವಾಮಿಯವರ ಕಲಿಕಾ ಪ್ರಯತ್ನಗಳಿಗೆ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರೂ ಕೂಡ ಸಾಥ್‌ ನೀಡಿದ್ದಾರೆ. ಬೆಳಿಗ್ಗೆ 6. 30 ರಿಂದ ಕಲಿಕಾ ತರಬೇತಿ ಪ್ರಾರಂಭವಾಗುತ್ತದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *