ಕರ್ನಾಟಕದಲ್ಲಿ ಏ.1 ರಿಂದ ಟೋಲ್‌ ದರ ಹೆಚ್ಚಳ: ಗ್ರಾಹಕರಿಗೆ ತಟ್ಟಲಿರುವ ಬಿಸಿ

ಇತ್ತೀಚಿನ

ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಕರ್ನಾಟಕದ ಟೋಲ್ ದರಗಳು ಏಪ್ರಿಲ್ 1 ರಿಂದ ಹೆಚ್ಚಾಗಲಿವೆ. ಇದು ವಾರ್ಷಿಕವಾಗಿ ನಡೆಯುವ ಹಣದುಬ್ಬರ ಆಧಾರಿತ ಪರಿಷ್ಕರಣೆ ಆಗಿದ್ದು, ದರಗಳು ಕನಿಷ್ಠ ಶೇ 3 ರಿಂದ ಗರಿಷ್ಠ 5 ರಷ್ಟು ಏರಿಕೆಯಾಗಲಿವೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಈ ಹೆಚ್ಚಳವು ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಜಾರಿಯಾಗಲಿದೆ. ಟೋಲ್ ಗುತ್ತಿಗೆ ಅವಧಿ ಆಧರಿಸಿ ದರಗಳು ಬದಲಾಗಲಿವೆ. ಈ ಹೆಚ್ಚುವರಿ ಶುಲ್ಕ ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ತಿಳಿಸಿದೆ.

ಎಲ್ಲೆಲ್ಲಿ ಟೋಲ್ ಹೆಚ್ಚಳ ?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಬಿ ಜಯಕುಮಾರ ಮಾತನಾಡಿ, ಗರಿಷ್ಠ ಶೇ.5 ಮತ್ತು ಕನಿಷ್ಠ ಶೇ.3 ರಷ್ಟು ಟೋಲ್ ದರ ಹೆಚ್ಚಳವಾಗಲಿದೆ ಎಂದರು.

ಬೆಂಗಳೂರು-ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು-ತಿರುಪತಿ ಮಾರ್ಗದ ನಂಗ್ಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ, ಮತ್ತು ಹುಲಿಕುಂಟೆ ಹಾಗೂ ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಟೋಲ್ ಪ್ಲಾಜಾಗಳಲ್ಲಿ ದರಗಳು ಹೆಚ್ಚಾಗಲಿವೆ.

ಹೊಸ ಪಾಲಿಸಿ ?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಟೋಲ್ ಶುಲ್ಕಗಳ ಬಗ್ಗೆ ಹೊಸ ನಿಯಮಗಳನ್ನು ತರಲು ಸಿದ್ಧವಾಗಿದೆ. ರಸ್ತೆ ಬಳಕೆದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 19 ರಂದು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 2023-24 ರಲ್ಲಿ 64,809.86 ಕೋಟಿ ರೂ ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.35 ರಷ್ಟು ಹೆಚ್ಚಾಗಿದೆ. 2019-20ರಲ್ಲಿ ಸಂಗ್ರಹವು 27,503 ಕೋಟಿ ರೂ ಇತ್ತು ಎಂದುರು. ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳಿವೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮಗಳು, 2008 ರ ಪ್ರಕಾರ ಟೋಲ್ ಪ್ಲಾಜಾಗಳನ್ನು ಸ್ಥಾಪಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಪ್ರತಿಕ್ರಿಯಿಸಿ, ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

2008 ರ ನಿಯಮಗಳ ಪ್ರಕಾರ, ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಶುಲ್ಕಗಳನ್ನು ಹೆಚ್ಚಿಸಲಾಗುತ್ತದೆ. ಇದು ಸಾಮಾನ್ಯ ಹೆಚ್ಚಳ. ನಾವು ಪ್ರವಾಸಿ ಕ್ಯಾಬ್ ಮತ್ತು ಟ್ಯಾಕ್ಸಿಗಳನ್ನು ನಿರ್ವಹಿಸುತ್ತೇವೆ. ಹೀಗಾಗಿ, ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುತ್ತೇವೆ ಎಂದು ಹೇಳಿದ್ದಾರೆ. ಸರಳವಾಗಿ ಹೇಳಬೇಕೆಂದರೆ, ಟೋಲ್ ದರ ಏರಿಕೆಯ ಬಿಸಿ ಗ್ರಾಹಕರಿಗೂ ತಟ್ಟಲಿದೆ.

Leave a Reply

Your email address will not be published. Required fields are marked *