ಕಲಬುರಗಿ: ಸನ್ನಡತೆ ಆಧಾರದಡಿ ಜೈಲು ಶಿಕ್ಷೆಯಿಂದ
ವಿನಾಯಿತಿ ಪಡೆದರೂ ಬಡತನದ ಕಾರಣದಿಂದ
ಜೈಲಿನಿಂದ ಹೊರಬರಲು ಕೈದಿಯೊಬ್ಬರು ಮೂರು
ತಿಂಗಳು ಕಾಯಬೇಕಾಯಿತು. ಕೊನೆಗೆ ಜೈಲಿನಲ್ಲಿ ತಾನೆ
ದುಡಿದ ಹಣದಿಂದ ಬಿಡುಗಡೆಯ ಭಾಗ್ಯ ತಂದು ಕೊಟ್ಟಿದೆ.
ಇದು ಜೈಲು ಹಕ್ಕಿ ಬಂಧಮುಕ್ತಗೊಂಡ ಯಶೋಗಾಥೆ.
ಇದಕ್ಕೆ ಜೈಲಧಿಕಾರಿ ನೆರವಾಗಿ ಮಾನವೀಯ ಸ್ಪರ್ಶ
ನೀಡಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ದುರ್ಗಪ್ಪ
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಹಲವು ವರ್ಷಗಳ
ಬಳಿಕ 2013ರಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ
ಕೊಲೆಯಾದ ಕುಟುಂಬಕ್ಕೆ 1 ಲಕ್ಷ ರೂ. ದಂಡದ ರೂಪದಲ್ಲಿ
ನ್ಯಾಯಾಲಯ ವಿಧಿಸಿತ್ತು.
ಬಳಿಕ ಸನ್ನಡತೆ ಆಧಾರದಲ್ಲಿ 2023ರ ನ.28 ರಂದು
ದುರ್ಗಪ್ಪನನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ದಂಡದ
ಹಣ 1 ಲಕ್ಷ ರೂ. ಕಟ್ಟಲು ಸಾಧ್ಯವಾಗಲಿಲ್ಲ. ದಂಡ ಕಟ್ಟಿ
ಕರೆದುಕೊಂಡು ಹೋಗಿ ಎಂದು ಹೇಳಿದರೂ ಸಂಬಂಧಿಕರು,
ಸಹೋದರ ಮತ್ತು ಕೆಲವು ಎನ್‌ಜಿಒಗಳು (ಕೈದಿಗಳ
ಆರೈಕೆಗೆ ನಿಂತಿದ್ದ) ಯಾರೂ ಬರಲಿಲ್ಲ. ಏಕೆಂದರೆ ದುರ್ಗಪ್ಪನ ಹತ್ತಿರ ಕೊಡಲಿಕ್ಕೆ ಏನೂ ಇರಲಿಲ್ಲ.
ದುರ್ಗಪ್ಪ ಬಂಧ ಮುಕ್ತ
ಆಗ ನೆರವಾದ ಜೈಲಧಿಕಾರಿ ಡಾ| ಅನಿತಾ ಆರ್.
ಕೈದಿಯನ್ನು ಲಿಂಗಸಗೂರಿಗೆ ಕಳಿಸಿ ತಾನೇ ದುಡಿದಿಟ್ಟ
ಹಣವನ್ನು ಡ್ರಾ ಮಾಡಿಸಿಕೊಂಡು ಬರಲು ಅನುವು
ಮಾಡಿಕೊಟ್ಟರು. ಈ ಮೂಲಕ ಜೈಲಿಗೂ ಮಾನವೀಯ
ಮುಖ ಇದೆ ಎಂದು ತೋರಿಸಿಕೊಟ್ಟರು.
ದಾರಿದೀಪವಾದ ಜೈಲಧಿಕಾರಿ
ಜೈಲಿನಿಂದ ಹೊರ ಬಂದ ಬಳಿಕ ಮುಖದಲ್ಲಿ ನಗುವಿದ್ದರೂ
ಎಲ್ಲಿಗೆ ಹೋಗಬೇಕು ? ಯಾರ ಬಳಿ ಹೋಗಬೇಕು? ಎಂದು
ತಿಳಿಯದೆ ದುರ್ಗಪ್ಪ ಅಸಹಾಯಕರಾಗಿ ನಿಂತಿದ್ದನು.
ಇದನ್ನು ನೋಡಿದ ತಾಯಿ ಕರುಳಿನ ಡಾ. ಅನಿತಾ ಮತ್ತೆ
ತಾವೇ ಮುತುವರ್ಜಿ ವಹಿಸಿ ಸಿಬಂದಿಯ ಜತೆಗೂಡಿ
ಲಿಂಗಸೂರು ಬಸ್ ಹತ್ತಿಸಿ ಕಳಿಸಿದರು.
ಕೈದಿಗಳಿಗೆ ಶಿಕ್ಷೆಯ ಜತೆ ಸುಧಾರಣೆಗೆ ಅವಕಾಶ ಕೊಡುವುದು ಬಂದಿಖಾನೆ ಇಲಾಖೆ ಮುಖ್ಯ ಜವಾಬ್ದಾರಿ. ಅದನ್ನು ನಿಭಾಯಿಸುವಲ್ಲಿ ಕಲಬುರಗಿ ಜೈಲು ತನ್ನ ಹೊಣೆ ನಿಭಾಯಿಸಿದೆ. ಅದರ ಖುಷಿ ಮತ್ತು ಕೆಲಸದ ತೃಪ್ತಿ ಇದೆ. ದುರ್ಗಪ್ಪ ಬಿಡುಗಡೆ ಆದಾಗ ಸ್ವಾಗತಿಸಲು ಯಾರು ಬರಲಿಲ್ಲ. 68 ವಯಸ್ಸಿನ ಹಿರಿಜೀವವನ್ನು ಹೊರ ಹಾಕಲು ಸಾಧ್ಯವಿಲ್ಲ. ಹಾಗೆಯೇ ಬಿಡುವಂತೆಯೂ ಇರಲಿಲ್ಲ. ಬಳಿಕ ಪೊಲೀಸ್ ಸಿಬಂದಿಯ ಜೊತೆಗೆ ಊರಿಗೆ ಕಳಿಸಿಕೊಡಲಾಯಿತು.
– ಡಾ. ಅನಿತಾ ಆರ್, ಜೈಲಧಿಕಾರಿ ಕಲಬುರಗಿ