ಚಿತ್ತಾಪುರ: ಕನ್ನಡ ನಾಡಿನಾದ್ಯಂತ ಸರಕಾರಕ್ಕಿಂತ ಮೊದಲು ಮಠ ಮಾನ್ಯಗಳು ಉಚಿತವಾಗಿ ಅನ್ನ, ಅಕ್ಷರ, ಆಶ್ರಯ ನೀಡುತ್ತಾ ಬಂದಿದ್ದು ಜನರಲ್ಲಿ ಅಕ್ಷರ ಸಂಸ್ಕೃತಿ ಬಿತ್ತುವಲ್ಲಿ ಮಠಗಳ ಪಾತ್ರ ಅನನ್ಯ ಎಂದು ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯ ಸಂಸ್ಥಾಪಕ, ನಾಡೋಜ ಡಾ.ಮೋಹನ್ ಆಳ್ವಾ ಹೇಳಿದರು.
ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ವತಿಯಿಂದ ಪ್ರದಾನ ಮಾಡಿದ ಪ್ರತಿಷ್ಠಿತ “ಶ್ರೀ ಸಿದ್ಧತೋಟೇಂದ್ರ ಶಿಕ್ಷಣ ರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ನಾಡು ಸಂಸ್ಕಾರಯುತವಾಗಿ ಬೆಳೆಯಲು ಮಠಗಳು ಜನಮನದಲ್ಲಿ ಬಿತ್ತಿದ ಆಧ್ಯಾತ್ಮಿಕ ಮೌಲ್ಯಗಳೇ ಕಾರಣ. ಜಾತಿ ಮತ ಪಂಥ ನೋಡದೆ ಇಡೀ ಮನುಕುಲವನ್ನು ಏಕಮುಖವಾಗಿ ನೋಡಿ ಉದ್ಧರಿಸುವ ಕೆಲಸ ಮಠಗಳು ಮಾಡಿವೆ. ಅವುಗಳ ಪ್ರೇರಣೆಯಿಂದಲೇ ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ನಾಲವಾರ ಕೋರಿಸಿದ್ಧೇಶ್ವರ ಮಠಕ್ಕೆ ಲಕ್ಷಾಂತರ ಭಕ್ತ ಸಮೂಹ ಹರಿದು ಬರುವುದನ್ನು ಕಂಡು ಮೂಕ ವಿಸ್ಮಿತನಾಗಿರುವೆ. ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಕಲಾರಾಧಕರು, ಸಾಹಿತಿಗಳು ಆಗಿದ್ದು ಅವರ ವಿಭಿನ್ನ ಆಲೋಚನೆಗಳು ಮಠವನ್ನು ಸಮಾಜಮುಖಿಯಾಗಿಸಿವೆ ಎಂದರು.
ಆಳ್ವಾಸ್ ಸಂಸ್ಥೆಯ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮ “ಆಳ್ವಾಸ್ ವಿರಾಸತ್” ಅನ್ನು ಸಧ್ಯದಲ್ಲಿಯೇ ನಾಲವಾರ ಶ್ರೀಮಠದಲ್ಲಿ ಆಯೋಜಿಸುವ ಆಕಾಂಕ್ಷೆ ಇದ್ದು, ಪೂಜ್ಯರು ಸಮ್ಮತಿ ನೀಡಬೇಕು ಎಂದು ಹೇಳಿದರು.
ನಾಲವಾರ ಶ್ರೀಮಠದ ವತಿಯಿಂದ ನೀಡಿರುವ ಪ್ರಶಸ್ತಿಯನ್ನು ನಾನು ಆಶೀರ್ವಾದ ಎಂದು ಸ್ವೀಕರಿಸಿ, ನಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಾವಿರಾರು ಸಿಬ್ಬಂದಿಗೆ ಈ ಪ್ರಶಸ್ತಿ ಸಮರ್ಪಿಸುವೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಹುಕ್ಕೇರಿ ಸಂಸ್ಥಾನದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.
ಸಮಾರಂಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ, ಸುರೇಶ ಸಜ್ಜನ್,ಮಹಾದೇವ ಗಂವ್ಹಾರ,ಶರಣಕುಮಾರ ಜಾಲಹಳ್ಳಿ,ಮಹೇಶಬಾಬು ಸುರ್ವೆ,ಗೋವಾ ಕನ್ನಡ ಸಂಘದ ಅಧ್ಯಕ್ಷ ಹಣಮಂತರೆಡ್ಡಿ ಶಿರೂರ, ಆನಂದ ಮದ್ರಿ,ಗೋಪಾಲ ರಾಠೋಡ ಸೇರಿದಂತೆ ಅನೇಕರು ಇದ್ದರು.
ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.