ಚಿತ್ತಾಪುರ: ಕನ್ನಡ ಸಾರಸತ್ವ ಲೋಕದಲ್ಲಿ ದ್ರುವ ನಕ್ಷತ್ರದಂತೆ ಬೆಳಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ವರಕವಿ ದ.ರಾ ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕಿ ಭುವನೇಶ್ವರಿ ಎಂ ಹೇಳಿದರು.
ಸಮೀಪದ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದ.ರಾ ಬೇಂದ್ರೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯವೆಂಬ ಮಾತು ಸಾಹಿತ್ಯ ವಲಯದಲ್ಲಿ ಕೇಳುತ್ತೆವೆ. ಹುಟ್ಟು ಸಾಮಾನ್ಯವಾದರೂ ಸಾವು ಚರಿತ್ರೆ ಆಗಬೇಕು ಎನ್ನುವ ಮಾತಿನಂತೆ ಬಡತನದಲ್ಲೇ ಹುಟ್ಟಿ ಬೆಳೆದ ಬೇಂದ್ರೆ ಅವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರದಲ್ಲಿ ಸಾಧನೆ ಮಾಡಿದ್ದಾರೆ. ಇವತ್ತಿನ ಪೀಳಿಗೆ ಹೆಚ್ಚು ಹೆಚ್ಚು ಸಾಹಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ, ನರಬಲಿ ಎನ್ನುವ ಕವನದ ಮೂಲಕ ಆಗಿನ ಬ್ರಿಟಿಷ್ ಸರ್ಕಾರವನ್ನೇ ಪ್ರಶ್ನಿಸಿ ಜೈಲು ಸೇರಿದ ಬೇಂದ್ರೆ ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇವರನ್ನು ಕನ್ನಡದ ಟ್ಯಾಗೋರ್ ಎಂದು ಹೆಸರಾಗಿದ್ದಾರೆ ಬೇಂದ್ರೆ ಇವತ್ತಿನ ಪೀಳಿಗೆಯ ಅಸಂಖ್ಯಾತ ಕವಿ, ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ವೇದಿಕೆಯ ಮೇಲೆ ಶಾಲೆಯ ಮುಖ್ಯಗುರು ವಿದ್ಯಾಧರ ಖಂಡಾಳ, ಶಿಕ್ಷಕರಾದ ಶಿವಕುಮಾರ್ ಸರಡಗಿ, ಶ್ಯಾಮಸುಂದರ ದೊಡ್ಡಮನಿ, ಶೀಲಾ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಮಹಾಲಕ್ಷ್ಮಿ ನಿರೂಪಿಸಿದರು, ಮೇಘನಾ ವಂದಿಸಿದರು.