ಭೋಪಾಲ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳು ಶೀಘ್ರವೇ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಈ ಆಸ್ತಿಗಳ ಮೇಲೆ 2015ರಲ್ಲಿ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಮಧ್ಯಪ್ರದೇಶ ಹೈಕೋರ್ಟ್ ತೆಗೆದುಹಾಕಿದೆ. ಇದರಿಂದಾಗಿ 1968ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಡಿ.13 ರಂದು, 2017 ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ ಅಡಿ ಶಾಸನಬದ್ಧ ಪರಿಹಾರವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ದಿನಗಳ ಪ್ರಾತಿನಿಧ್ಯ ಸಲ್ಲಿಸಬೇಕೆಂದು ಪಟೌಡಿ ಕುಟುಂಬಕ್ಕೆ ಸೂಚಿಸಿತ್ತು. ಇಂದಿನಿಂದ ಈ ಆದೇಶಕ್ಕೆ ಸಂಬಂಧಿಸಿಂತೆ 30 ದಿನಗಳ ಒಳಗಡೆ ಮೇಲ್ಮನವಿ ಸಲ್ಲಿಸದೇ ಇದ್ದರೆ ಕೋರ್ಟ್ ಆದೇಶ ಪ್ರಕಟಿಸುವುದಿಲ್ಲ. ಒಂದು ವೇಳೆ ಸಲ್ಲಸದೇ ಇದ್ದರೆ ಕೋರ್ಟ್ ತತನ್ನದೇ ಆದ ಆರ್ಹತೆಯ ಆಧಾರದ ಮೇಲೆ ಮೇಲ್ಮನವಿಯನ್ನು ಪರಿಗಣಿಸುತ್ತದೆ ಎಂದು ಹೇಳಿತ್ತು. ಇಲ್ಲಿಯವರೆಗೆ ಪಟೌಡಿ ಕುಟುಂಬಸ್ಥರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರಾ ಇಲ್ಲವೋ ತಿಳಿದು ಬಂದಿಲ್ಲ.
ಭೋಪಾಲ್ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ಅವರು ಈ ವಿಷಯದ ಬಗ್ಗೆ ಹೈಕೋರ್ಟ್ ಆದೇಶ ಸ್ಪಷ್ಟವಾದ ನಂತರವೇ ಯಾವುದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಏನಿದು ಪ್ರಕರಣ ?
ಮುಂಬೈ ಮೂಲದ ಎನಿಮಿ ಪ್ರಾಪರ್ಟಿ ಕಸ್ಟೋಡಿಯನ್ ಕಚೇರಿ ಭೋಪಾಲ್‌ನ ನವಾಬನನ್ನು ಸರ್ಕಾರಿ ಆಸ್ತಿ ಎಂದು ಘೋಷಿಸಿದ ನಂತರ ಮಧ್ಯಪ್ರದೇಶ ಹೈಕೋರ್ಟ್ 2015ರಲ್ಲಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿತ್ತು.
ಭೋಪಾಲ್‌ನ ಮಾಜಿ ನವಾಬರಿಗೆ ಸೇರಿದ್ದ ನಟ, ಈಗಿನ ನವಾಬ ಸೈಫ್ ಅಲಿ ಖಾನ್ ಅವರಿಗೆ ಸೇರಿದ ಆಸ್ತಿಯನ್ನು 2015ರಲ್ಲಿ ‘ಶತ್ರುವಿನ ಸೊತ್ತು’ಗಳ ಪಟ್ಟಿಗೆ ಸೇರಿಸಲಾಗಿದೆ. ಸರ್ಕಾರ ಈ ಧೋರಣೆಯನ್ನು ಪ್ರಶ್ನಿಸಿ ಸೈಫ್ ಅಲಿ ಖಾನ್ ಅವರು 2015ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿಯವರೆಗೆ ಆಸ್ತಿ ವಶಪಡಿಸಲು ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಪಟ್ಟಿಗೆ ಸೇರ್ಪಡೆಯಾಗಿದ್ದು ಯಾಕೆ ?
ಭಾರತ ಸ್ವಾತಂತ್ರ್ಯ ಪಡೆಯುವಾಗ 1947ರಲ್ಲಿ ಭೋಪಾಲ್ ರಾಜಪ್ರಭುತ್ವದ ರಾಜ್ಯವಾಗಿತ್ತು ಮತ್ತು ನವಾಬ್ ಹಮೀದುಲ್ಲಾ ಖಾನ್ ಅದರ ಕೊನೆಯ ನವಾಬ್ ಆಗಿದ್ದರು. ನವಾಬ್ ಹಮೀದುಲ್ಲಾ ಖಾನ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದರು ಅವರಲ್ಲಿ ಅಬಿದಾ ಸುಲ್ತಾನ್ 1950ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.
1960ರ ದಶಕದವರೆಗೂ ಬದುಕಿದ್ದ ಹಮೀದುಲ್ಲಾ ಅವರು ತಮ್ಮ ಇನ್ನೊಬ್ಬ ಪುತ್ರಿ, ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಾಯಿ ಸಜೀದಾ ಸುಲ್ತಾನಾ ಅವರನ್ನು ತಮ್ಮ ಆಸ್ತಿಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಇದ್ದು ಇಫ್ತಿಕರ್ ಅಲಿ ಖಾನ್ ಪಟೌಡಿ(ಸೈಫ್ ಅಲಿಖಾನ್ ಅವರ ಅಜ್ಜ, ಮನ್ಸೂರ್ ಅಲಿಖಾನ್ ಅವರ ತಂದೆ) ಅವರನ್ನು ವಿವಾಹವಾದರು. ನ್ಯಾಯಾಲಯವು ಸಾಜಿದಾ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿಯಾಗಿ ಗುರುತಿಸಿತ್ತು ಮತ್ತು ಸೈಫ್ ಅಲಿ ಖಾನ್ ಆಸ್ತಿಯಲ್ಲಿ ಪಾಲನ್ನು ಪಡೆದರು.
2016ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಹೊಸ ಕಾಯ್ದೆಯಲ್ಲಿ ಭಾರತೀಯ ಪ್ರಜೆಗೆ ಅನ್ವಯವಾಗುವುದಿಲ್ಲ ಎಂಬ ಸಾಲುಗಳನ್ನು ತೆಗೆದುಹಾಕಲಾಗಿದೆ. ಅಷ್ಟೇ ಅಲ್ಲದೇ ಕಾಯ್ದೆಯನ್ನು ಪೂರ್ವಾನ್ವಯವಾಗುವಂತೆ ಜಾರಿ ಮಾಡಲಾಗಿದೆ. ಆದ್ದರಿಂದ ಹಿಂದೆ ಇಂಥ ಆಸ್ತಿಗಳು ಮಾರಾಟವಾಗಿದ್ದರೆ ಆ ಎಲ್ಲಾ ವ್ಯವಹಾರಗಳು ರದ್ದಾಗುತ್ತವೆ. ಕಾಯ್ದೆಯ ತಿದ್ದುಪಡಿಯ ಬಳಿಕ ಸರ್ಕಾರವು ಪಟೌಡಿ ಹಸ್ತಾಂತರವನ್ನು ರದ್ದುಪಡಿಸಿ, ಅವರ ಆಸ್ತಿಯನ್ನು ‘ಶತ್ರುವಿನ ಸೊತ್ತು’ ಎಂದು ಹೇಳಿತ್ತು. ಈ ಪ್ರಕರಣದಲ್ಲಿ ಅಬಿದಾ ಸುಲ್ತಾನ್ ಅವರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರಿಂದ ಸರ್ಕಾರ ಪಟೌಡಿ ಆಸ್ತಿ ʼಶತ್ರು ಆಸ್ತಿʼ ಎಂದು ದೃಢೀಕರಿಸಲು ಸಾಧ್ಯವಾಯಿತು.
ಈ ಪ್ರಕರಣದಲ್ಲಿ ಕಕ್ಷಿದಾರರಾಗಿ ಸೈಫ್ ಅಲಿ ಖಾನ್, ಅವರ ತಾಯಿ ಶರ್ಮಿಳಾ ಟ್ಯಾಗೋರ್, ಸಹೋದರಿಯರಾದ ಸೋಹಾ ಅಲಿ ಖಾನ್ ಮತ್ತು ಸಬಾ ಅಲಿ ಖಾನ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಸಹೋದರಿ ಸಬಿಹಾ ಸುಲ್ತಾನ್ ಮತ್ತು ಕೇಂದ್ರ ಸರ್ಕಾರ ಇತರರು ಇದ್ದಾರೆ.
ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಕಳೆದ ಫ್ಲ್ಯಾಗ್ ಸ್ಟಾಫ್ ಹೌಸ್, ನೂರ್-ಉಸ್-ಸಬಾ ಅರಮನೆ, ದಾರ್-ಉಸ್-ಸಲಾಮ್, ಹಬೀಬಿಯ ಬಂಗಲೆ, ಅಹಮದಾಬಾದ್ ಅರಮನೆ, ಕೊಹೆಫಿಜಾ ಆಸ್ತಿ ಪರಿಶೀಲನೆಯಲ್ಲಿರುವ ಪ್ರಮುಖ ಆಸ್ತಿಗಳಾಗಿವೆ.
ಪಾಕಿಸ್ತಾನದಲ್ಲೂ ಭಾರತೀಯ ಪ್ರಜೆಗಳಿಗೆ ಸೇರಿದ್ದ ಆಸ್ತಿ ಇತ್ತು. ಅಲ್ಲಿನ ಸರ್ಕಾರವು ಈಗಾಗಲೇ ಅವುಗಳನ್ನು ವಿಲೇವಾರಿ ಮಾಡಿ ಸರ್ಕಾರ ವಶಕ್ಕೆ ಪಡೆದಿದೆ.