ಸುದ್ದಿ ಸಂಗ್ರಹ ಗದಗ
ಸ್ವಂತ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳುವ ಕನಸು ಕಂಡ ಬಡ ಜನರು ವಂಚನೆಯ ಬಲೆಗೆ ಬಿದ್ದು ಒದ್ದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯ ಹೆಸರಿನಲ್ಲಿ ಲಕ್ಷಾಂತರ ರೂ ಸಾಲ ಕೊಡಿಸುವ ಬಣ್ಣ ಬಣ್ಣದ ಆಮಿಷಕ್ಕೆ ಮಾರುಹೋಗಿದ್ದಾರೆ. 5 ಲಕ್ಷ ರೂ.ದಿಂದ 25 ಲಕ್ಷ ರೂ.ವರೆಗೆ ಸಬ್ಸಿಡಿ ಸಹಿತ ಸಾಲ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ಸರ್ಕಾರದ ಯೋಜನೆಯನ್ನ ನಂಬಿ ಹಣ ಕಳೆದುಕೊಂಡ ಬಡ ಫಲಾನುಭವಿಗಳು ಇದೀಗ ನ್ಯಾಯಕ್ಕಾಗಿ ಬೀದಿ ಬೀದಿ ಅಲೆಯುವಂತಾಗಿದೆ.
ನಡೆದಿದ್ದೆನು ?
ಸರ್ಕಾರಿ ಯೋಜನೆಯಡಿ ಲಕ್ಷಾಂತರ ರೂ ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿಯಲ್ಲಿ ಲಕ್ಷ್ಮಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಕಚೇರಿಯೊಂದನ್ನು ಆರಂಭಿಸಿ, ಟೈಲರಿಂಗ್, ರೊಟ್ಟಿ ತಯಾರಿಕಾ ಘಟಕ, ಸಿಮೆಂಟ್ ಇಟ್ಟಿಗೆ ತಯಾರಿಕೆಯಂತಹ ಸ್ವಯಂ ಉದ್ಯೋಗ ಆರಂಭಿಸಲು ಸರ್ಕಾರದಿಂದ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಬಣ್ಣ ಬಣ್ಣದ ಮಾತುಗಳನ್ನಾಡಿ ಜನರನ್ನು ನಂಬಿಸಿದ್ದಾರೆ.
ಫಲಾನುಭವಿಗಳಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು ಎಲ್ಲಾ ಪ್ರಕ್ರಿಯೆಗಳನ್ನು ತಾವೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೆ ಇದಕ್ಕಾಗಿ ತಲಾ 10 ಸಾವಿರದಿಂದ 30 ಸಾವಿರ ರೂ.ದವರೆಗೆ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೆ ಅಲ್ಲದೆ ಸಾಲ ಮಂಜೂರಾದ ಬಳಿಕ ಮತ್ತಷ್ಟು ಹಣ ನೀಡುವಂತೆ ಷರತ್ತು ವಿಧಿಸಲಾಗಿತ್ತು ಎನ್ನಲಾಗಿದೆ. ಹಣ ನೀಡಿದವರಿಗೆ ಚೆಕ್ ಕೂಡ ನೀಡಲಾಗಿತ್ತು. ಆದರೆ ಈಗ ಸಾಲವೂ ಇಲ್ಲ, ಕೊಟ್ಟ ಹಣ ಕೂಡ ಇಲ್ಲ. ಅತ್ತ ಕಚೇರಿಯನ್ನ ಮುಚ್ಚಲಾಗಿದ್ದು, ಇತ್ತ ಹಣ ಕಳೆದುಕೊಂಡ ಬಡ ಕುಟುಂಬಗಳು ಕಂಗಾಲಾಗಿವೆ.
ಸಬ್ಸಿಡಿ ಸಾಲದ ಆಮಿಷವೊಡ್ಡಿ ಹಣ ಪಡೆದು ಪರಾರಿ
ಗ್ರಾಮೀಣ ಭಾಗದ ಜನರೆ ಲಕ್ಷ್ಮಿ ಎಂಟರ್ ಪ್ರೈಸಸ್ನ ಟಾರ್ಗೆಟ್. ಗ್ರಾಮೀಣ ಭಾಗದ ನೂರಾರು ಜನರಿಗೆ ಸಬ್ಸಿಡಿ ಸಾಲದ ಆಮಿಷವೊಡ್ಡಿ ಹಣ ವಸೂಲಿ ಮಾಡಿದ್ದಾರೆ. ನಿತ್ಯ ದುಡಿದ ಹಣದಲ್ಲೆ ಅಷ್ಟೊ ಇಷ್ಟೊ ಕೂಡಿಟ್ಟಿದ್ದ ಹಣವನ್ನು ನೀಡಿದ್ದರು. ಆದರೆ ಇದೀಗ ವಂಚಕರು ಕಚೇರಿಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾರೆ. ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಬಡ ಜನರು ಇದೀಗ ಹಣ ವಾಪಸ್ ಪಡೆಯಲು ಪರದಾಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂತ ಅಲೆದಾಡುತ್ತಿದ್ದಾರೆ.
ಸಾವಿರಾರು ರೂ ಹಣ ಕಳೆದುಕೊಂಡ ಬಡ ಜನರು ಇದೀಗ ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ. ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಪೊಲೀಸರು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕಿದೆ.