ಒಂದೆ ತಿಂಗಳಲ್ಲಿ 3 ಬಾರಿ ಲಘು ಭೂಕಂಪ: ಬೆಚ್ಚಿಬಿದ್ದ ವಿಜಯಪುರ ಜನ

ಜಿಲ್ಲೆ

ಸುದ್ದಿ ಸಂಗ್ರಹ ವಿಜಯಪುರ
ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ವಾತಾವರಣ ಮನೆ ಮಾಡಿದೆ. ಕಳೆದ ಹಲವು ವರ್ಷಗಳಿಂದ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಂಟಾಗುತ್ತಿದ್ದ ಭೂಕಂಪನದ ಅನುಭವ ಇದೀಗ ಮತ್ತೆ ಶುರುವಾಗಿದೆ. ಒಂದೆ ತಿಂಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, ಜನರು ಭಯಗೊಳ್ಳುವಂತೆ ಮಾಡಿದೆ.

ಒಂದೆ ತಿಂಗಳಲ್ಲೆ ಮೂರು ಬಾರಿ ಭೂಕಂಪನ
ಕಳೆದ ಕೆಲ ವರ್ಷಗಳಿಂದ ವಿಜಯಪುರ ಜಿಲ್ಲೆಯ ತಿಕೋಟಾ‌, ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ ತಾಲೂಕಿನ ಭಾಗಗಳಲ್ಲಿ ಭೂಕಂಪನವಾಗಿರುವ ವರದಿಯಾಗಿದೆ. ಇದೀಗ ಬಸವನಬಾಗೇವಾಡಿ ತಾಲೂಕಿನಲ್ಲಿ ಸೆಪ್ಟೆಂಬರ್​ನಲ್ಲಿ ಮೂರು ಬಾರಿ ಭೂಕಂಪನವಾಗಿರುವ ವರದಿಯಾಗಿದೆ. ಸೆಪ್ಟೆಂಬರ್ 30ರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಬಸವನಬಾಗೇವಾಡಿ ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಸುಮಾರು 3.9 ಕಿ.ಮೀ ದೂರದ ಕೇಂದ್ರ ಬಿಂದುವಿನಲ್ಲಿ ಭೂಕಂಪನ ಸಂಭವಿಸಿದೆ. ಸೆಪ್ಟೆಂಬರ್​ ಒಂದೆ ತಿಂಗಳಲ್ಲಿ ಮೂರು ಬಾರಿ ಲಘು ಭೂಕಂಪನ ಸಂಭವಿಸಿದೆ. ಹೀಗೆ ಪದೆ ಪದೆ ಭೂಮಿ ಕಂಪಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಭೂಮಿಯಿಂದ 10 ಕಿ.ಮೀ ಆಳದಲ್ಲಿ ಸಂಭವಿಸಿರುವ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5 ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 28ರ ಮಧ್ಯರಾತ್ರಿ 12.26ರ ಸುಮಾರಿಗೆ ತಾಲೂಕಿನ ದಿಂಡಿವಾರ ಗ್ರಾಮ ಪಂಚಾಯಿತಿ ಕಚೇರಿಯಿಂದ ಸುಮಾರು 1.1 ಕಿ.ಮೀ ನೈಋತ್ಯ ದಿಕ್ಕಿನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿತ್ತು. ಇದರ ತೀವ್ರತೆಯೂ 3.5ರಷ್ಟಿತ್ತು. ಅಷ್ಟೆ ಅಲ್ಲದೆ ಸೆಪ್ಟೆಂಬರ್ 17ರಂದು ನಸುಕಿನ ಜಾವ 5.30ರ ಸುಮಾರಿಗೆ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಮೀಪದಲ್ಲಿ 3.7 ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು. ಹೀಗೆ ಒಂದೆ ತಿಂಗಳಲ್ಲಿ ತಾಲೂಕಿನಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವೈಜ್ಞಾನಿಕ ಅಧ್ಯಯನಕ್ಕೆ ಆಗ್ರಹ
‘ಇನ್ನು ಪದೆ ಪದೆ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಭೂಕಂಪನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಭೂಕಂಪನಕ್ಕೆ ಕಾರಣವೇನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಿ, ಸಾರ್ವಜನಿಕರಲ್ಲಿರುವ ಆತಂಕ ದೂರ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಲಘು ಭೂಕಂಪನ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಭೂವಿಜ್ಞಾನಿಗಳ ತಂಡ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ, ಭೂಕಂಪನದ ಸ್ವರೂಪ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.‌ ತಹಸೀಲ್ದಾರ್ ವೈ ಎಸ್ ಸೋಮನಕಟ್ಟಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ಮಾಡಿದ್ದಾರೆ. ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಚಂದ್ರಶೇಖರ ಕೆ ಮತ್ತು ಹಿರಿಯ ಭೂವಿಜ್ಞಾನಿ ಮಹೇಶ ಬಿರಾಜನವರ ಭೂಕಂಪನದ ಕುರಿತು ಮಾಹಿತಿ ನೀಡಿದರು.

ಭೂಮಿ‌ ಚಲನೆ ವೇಳೆ ನಡೆಯುವ ಸಹಜ ಪ್ರಕ್ರಿಯೆ, ಜನರು ಭಯಗೊಳ್ಳಬಾರದು; ಭೂವಿಜ್ಞಾನಿ ಚಂದ್ರಶೇಖರ
‘ಭೂಕಂಪನ ಆಗುತ್ತಿರುವ ಕಾರಣ ಮಣ್ಣಿನ ಗುಣ, ಭೂ ಚಲನೆ’ ಕುರಿತು ಭೂ ವಿಜ್ಞಾನಿ ಚಂದ್ರಶೇಖರ ಅವರು ಮಾಹಿತಿ‌ ನೀಡಿದರು.‌ ‘ಭೂಮಿಯಾಳದಲ್ಲಿ‌ ಸುಣ್ಣದ ಕಲ್ಲುಗಳ ಮಾದರಿ ಮಣ್ಣಿನ ಗುಣವಿದೆ. ಕಲ್ಲು ಪದರುಗಳಿದ್ದು, ಭೂಮಿ‌ ಚಲನೆ ವೇಳೆ ನಡೆಯುವ ಸಹಜ ಪ್ರಕ್ರಿಯೆ ಇದಾಗಿದೆ. ಸದ್ಯ 3.7 ಗರಿಷ್ಟ ತೀವ್ರತೆಯ ಕಂಪನವಾಗಿದೆ. ಇದರಿಂದ ಯಾವುದೆ ತೊಂದರೆಯಿಲ್ಲ‌, ಜನರು ಭಯಗೊಳ್ಳಬಾರದು’ ಎಂದು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಉಂಟಾಗಿರುವ ಭೂಕಂಪನ ಎಲ್ಲರ ಭಯಕ್ಕೆ ಕಾರಣವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಈಗ ಸಂಭವಿಸುತ್ತಿರುವ ಮತ್ತು ದಾಖಲಾಗಿರುವ ಭೂಕಂಪನ ಯಾವುದೆ ರೀತಿಯ ಮಾರಕವಲ್ಲ ಎಂದಿದ್ದಾರೆ. ಆದರೂ ಜನರು ಭಯಗೊಂಡಿದ್ದಾರೆ. ಹೆಚ್ಚಿನ ತೀವ್ರತೆಯ ಕಂಪನವಾದರೆ ಅಪಾಯ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *