ಸುದ್ದಿ ಸಂಗ್ರಹ ಶಹಾಬಾದ್
ವರ್ಷಾನುಗಟ್ಟಲೆ ಅಲೆದರೂ ಖಾತೆ ಮತ್ತು ಮ್ಯುಟೇಶನ್ ಮಾಡದ ಅಧಿಕಾರಿಗಳು ಕೇವಲ ಒಂದೆ ದಿನದಲ್ಲಿ 70 ಖಾತೆ ಹಾಗೂ ಮ್ಯುಟೇಶನ್ ಮಾಡಿರುವುದು ಮತ್ತು ಇವುಗಳಿಗೆ ಸೂಕ್ತ ದಾಖಲೆ ನಿರ್ವಹಿಸದೆ ಕರ್ತವ್ಯಲೋಪ ಎಸಗಿದ ಶಹಾಬಾದ್ ನಗರಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ್ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಆದೇಶ ಹೊರಡಿಸಿದ್ದಾರೆ.
ಕಂದಾಯ ಅಧಿಕಾರಿ ಜಗದೇವಿ, ಕರ ವಸೂಲಿಗಾರ ಮಾಣಿಕಪ್ಪ ಮೌರ್ಯ ಅವರನ್ನು ಅಮಾನತುಗೊಳಿಸಲಾಗಿದೆ.
ಆ.31 ಇತ್ತೀಚೆಗೆ ಶಾಸಕ ಬಸವರಾಜ ಮತ್ತಿಮಡು ಅವರು ನಗರಸಭೆಗೆ ದಿಢೀರ್ ಭೇಟಿ ನೀಡಿ ಒಂದೆ ದಿನ ಇಷ್ಟೊಂದು ಪ್ರಮಾಣದ ಖಾತೆ ಮತ್ತು ಮ್ಯುಟೇಶನ್ ವಿತರಣೆ ಮಾಡಿದ್ದನ್ನು ಕಂಡು ಅನುಮಾನ ವ್ಯಕ್ತಪಡಿಸಿದ್ದರು.
ಶಹಾಬಾದ್ ನಗರದ ಸರ್ವೆ ಸಂಖ್ಯೆ 183/9ರಲ್ಲಿ 21 ನಿವೇಶನಗಳನ್ನು ನಗರಸಭೆ ಆಸ್ತಿ ವಹಿಯಲ್ಲಿ ನಮೂದಿಸಿ, ಅವುಗಳಲ್ಲಿ 5 ಸ್ವತ್ತಗಳನ್ನು ಇ ಆಸ್ತಿ ತಂತ್ರಾಂಶಗಳ ಮೂಲಕ ಬಿ ಖಾತಾ (ಅನಧಿಕೃತ ಸಮೂನೆ 3ಎ) ನೀಡಿದ್ದು, ನಗರ ಸಭೆ ಖಾತಾ ಮ್ಯುಟೇಶನ್/ ಆಸ್ತಿ ನೋಂದಣಿ ಸಂಬಂಧ ನಡೆದಿರುವ ಪ್ರಕ್ರಿಯೆ ಕುರಿತು ಅಚ್ಚರಿ ವ್ಯಕ್ತಪಡಿಸಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಅವರಿಗೆ ಕೋರಿಕೆ ಸಲ್ಲಿಸಿದ್ದರು.
ಮ್ಯುಟೇಶನ್ ಮಾಡಿದ್ದಕ್ಕೆ ಪೂರಕ ದಾಖಲೆಗಳನ್ನು ನೀಡುವಂತೆ ಶಾಸಕರು ಕೇಳಿದಾಗ ಸೂಕ್ತ ದಾಖಲೆಗಳನ್ನು ಹಾಜರುಪಡಿಸಲಿಲ್ಲ. ಹೀಗಾಗಿ ಕರ್ತವ್ಯಲೋಪದ ಕಾರಣಕ್ಕಾಗಿ ಪೌರಾಯುಕ್ತ, ಕಂದಾಯ ಅಧಿಕಾರಿ ಹಾಗೂ ಕರ ವಸೂಲಿಗಾರನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.