KPSC ಹಗರಣದಲ್ಲಿ ನನ್ನ ಪಾತ್ರವನ್ನು ಬಿಜೆಪಿ ಬಹಿರಂಗ ಮಾಡಲಿ: ಪ್ರಿಯಾಂಕ್‌ ಖರ್ಗೆ ಸವಾಲು

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕೆಪಿಎಸ್‌ಸಿ ಹಗರಣದಲ್ಲಿ ನನ್ನ ಪಾತ್ರ ಏನಿದೆ ಎಂಬುದನ್ನು ಬಿಜೆಪಿ ಎಕ್ಸ್‌ಪೋಸ್‌ (ಬಹಿರಂಗ) ಮಾಡಲಿ. ಅದು ಜನರ ಮುಂದೆ ಬರಲೇಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಕೆಪಿಎಸ್‌ಸಿ ಹಗರಣ ಪ್ರಿಯಾಂಕ್‌ ಖರ್ಗೆ ವಿಕೆಟ್‌ ಬೀಳುತ್ತೆ ಎಂಬ ಬಿಜೆಪಿ ಹೇಳಿಕೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌, ‘ಕೆಪಿಎಸ್‌ಸಿ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿಕೆಟ್ ಬೀಳುವಂತಿದ್ದರೆ ಈ ವಿಷಯವನ್ನು ಬಿಜೆಪಿಯ ಹೇಡಿಗಳು ಸದನದಲ್ಲಿ ಯಾಕೆ ಚರ್ಚಿಸಲಿಲ್ಲ ?’ ಎಂದು ಪ್ರಶ್ನಿಸಿದರು.

ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ, ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಬಗ್ಗೆ, ಬಸವರಾಜ ಬಗ್ಗೆ ಯಾಕೆ ಮಾತನಾಡಿಲ್ಲ ? ಅವರನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಯಾರು ? ಶಾಂತಾ ಹೊಸಮನಿ ಅವರನ್ನು ಸದಸ್ಯರನ್ನಾಗಿ ಮಾಡಿದವರು ಯಾರು ?’ ಎಂದು ಕೇಳಿದರು.

ಬಿಜೆಪಿಯವರು ಈ ವಿಷಯದ ಬಗ್ಗೆ ಚರ್ಚೆಗೆ ಬರಲಿ. ಶಿವಶಂಕರಪ್ಪ ಸಾಹುಕಾರ್, ಬಸವರಾಜ, ನಿಮ್ಮ ಅವಧಿಯಲ್ಲಿದ್ದ ಅಧಿಕಾರಿಗಳ ಬಗ್ಗೆಯೂ ಮಾತನಾಡೋಣ ಎಂದು ಸವಾಲು ಹಾಕಿದರು.

ಕೆಪಿಎಸ್‌ಸಿ ಹಗರಣದಲ್ಲಿ ಬಿಜೆಪಿ ಬೌಲರ್‌ಗಳು ನನಗೆ ಫುಲ್‌ಟಾಸ್‌ ಕಂ ನೋಬಾಲ್‌ ಕೊಡುತ್ತಿದ್ದಾರೆ. ನಮಗೆ ಫ್ರೀ ಹಿಟ್‌ ಸಿಗುತ್ತಿದೆ. ಈ ಪಂದ್ಯದಲ್ಲಿ (ಕೆಪಿಎಸ್‌ಸಿ ಹಗರಣ) ಯಾರೆ ಅಂಪೈರ್‌ ಆಗಿದ್ದರೂ, ಬಿಜೆಪಿಯವರೇ ಔಟ್‌ ಆಗುವುದು ನಿಶ್ಚಿತ ಎಂದು ವ್ಯಂಗ್ಯವಾಡಿದರು.

ಬೀದರ್‌ನಲ್ಲಿ ಸಿಕ್ಕಿ ಬಿದ್ದ ಮಧ್ಯವರ್ತಿ ಬಸವರಾಜ ಹೆಗಲಿನ ಮೇಲಿರುವ ಶಲ್ಯ, ನಿಮ್ಮ ಹೆಗಲ ಮೇಲಿರುವ ಶಲ್ಯ, ನರೇಂದ್ರ ಮೋದಿ ಹೆಗಲ ಮೇಲಿರುವ ಶಲ್ಯ ಒಂದೆ ಅಲ್ಲವೆ ? ಅದು ಯಾವುದೋ ಒಂದು ಬಣ್ಣದ ಶಲ್ಯವಲ್ಲ, ಅದು ನಿಮ್ಮ ಪಕ್ಷದ ಚಿಹ್ನೆ ಇರುವ ಶಲ್ಯ. ಅದಕ್ಕೆ ಏನಂತೀರಿ ? ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರನ್ನು ಪ್ರಶ್ನಿಸಿದರು.

Leave a Reply

Your email address will not be published. Required fields are marked *