ಸುದ್ದಿ ಸಂಗ್ರಹ ಶಹಾಬಾದ್
ನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಯೂಸುಫ್ ಸಾಬ್ ನಾಕೇದಾರ ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ರಜನಿ ಎಂ ಆದೇಶಿಸಿದ್ದಾರೆ.
ಯೂಸುಫ್ ಸಾಬ್ ಆಗಸ್ಟ್ 25ರಂದು ಸಮುದಾಯ ಆರೋಗ್ಯ ಕೇಂದ್ರದ ಅಧೀನದಲ್ಲಿರುವ ಬಿಳಿ ಬಣ್ಣದ ಮೂರು ಕಬ್ಬಿಣದ ಕಾಟ್, ಒಂದು ಕಬ್ಬಿಣದ ಹಳೆಯ ಅಡ್ಜಸ್ಟೇಬಲ್ ಬೆಡ್ ಮತ್ತು ಮೂರು ಕಬ್ಬಿಣದ ಹಳೆಯ ರ್‍ಯಾಕ್‌ಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರದೆ ಹಾಗೂ ಯಾವುದೆ ಪೂರ್ವಾನುಮತಿ ಪಡೆಯದೆ ಖಾಸಗಿ ವಾಹನದಲ್ಲಿ ಸಾಗಿಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ವೈದ್ಯಾಧಿಕಾರಿ ನೀಡಿದ ಮಾಹಿತಿಯಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶಿಸ್ತು ಕ್ರಮಕ್ಕೆ ಕೋರಿದ್ದರು. ಅಮಾನತು ಅವಧಿಯಲ್ಲಿ ಯೂಸುಫ್ ಸಾಬ್ ಅವರಿಗೆ ಜೀವನಾಧಾರ ಭತ್ಯೆ ಪಾವತಿಸುವ ಸಲುವಾಗಿ ಇವರ ಲೀನ್‌ನ್ನು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.