ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ವೃತ್ತಿನಿರತ ಕುಶಲಕರ್ಮಿಗಳಿಂದ ಉಚಿತ ಉಪಕರಣಗಳು ಹಾಗೂ ಹೊಲಿಗೆ ಯಂತ್ರಗಳನ್ನು ಪಡೆಯಲು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕಾ ವಿಭಾಗದಿಂದ ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಧೋಬಿ ಹಾಗೂ ಕ್ಷೌರಿಕ ವೃತ್ತಿಯ ಉಚಿತ ಉಪಕರಣಗಳನ್ನು ಸಾಮಾನ್ಯ ಸೇರಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ನೀಡಲಾಗುವುದು. ಹಾಗೆಯೇ ಪೋರ್ಟೆಬಲ್ ಫ್ರೀ ಹ್ಯಾಂಡ್ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮಾತ್ರ ವಿತರಿಸಲಾಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಮತ್ತು ಒಂದು ಕುಟುಂಬದಿಂದ ಒಂದು ಅರ್ಜಿಗೆ ಮಾತ್ರ ಅವಕಾಶವಿರುತ್ತದೆ. ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 30ರವರೆಗೆ www.zpkalaburagi.karnataka.gov.in ಅಥವಾ kalaburagi.nic.in ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ಎಂ.ಎಸ್.ಕೆ. ಮಿಲ್ ರಸ್ತೆ, ಜೇವರ್ಗಿ ಕ್ರಾಸ್, ಕಲಬುರಗಿ ಕಚೇರಿ ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿ.ಪಂ ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.