ಸುದ್ದಿ ಸಂಗ್ರಹ ಕಲಬುರಗಿ
12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಮೂರು ಪ್ರತ್ಯೇಕ ಪೋಕ್ಸೊ ಪ್ರಕರಣಗಳಲ್ಲಿ ಮೂವರು ಯುವಕರಿಗೆ ಇಲ್ಲಿನ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಒಂದು ಪ್ರಕರಣದಲ್ಲಿ ಕಲಬುರಗಿಯ ಮಹಾದೇವ ನಗರದ ನಿವಾಸಿ ನಾಗೇಶ ಅಲಿಯಾಸ್ ಬಾಬು ರಾಠೋಡ (30) ನ್ಯಾಯಾಲಯವು 25 ವರ್ಷ ಜೈಲು ಮತ್ತು 45 ಸಾವಿರ ದಂಡ ವಿಧಿಸಿದೆ. ಇನ್ನೆರಡು ಪ್ರಕರಣಗಳಲ್ಲಿ ಕಲಬುರಗಿಯ ಶಿವರಾಜ ಅಲಿಯಾಸ್ ಸುರಜ್ಯಾ ಹೊನಗುಂಟಿ (20) ಹಾಗೂ ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲು ಶ್ರೀನವರ(19) ಎಂಬುವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ತಲಾ 55 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಒಂದು ಪ್ರಕರಣದಲ್ಲಿ 12 ವರ್ಷದ ಬಾಲಕಿಯ ಕುಟುಂಬದೊಂದಿಗೆ ಸಲುಗೆ ಹೊಂದಿದ್ದ ನಾಗೇಶ ಅಲಿಯಾಸ್ ಬಾಬು ಪ್ರೀತಿ ಮಾಡುವುದಾಗಿ ನಂಬಿಸಿದ್ದ. ಬಳಿಕ ಬಾಲಕಿಯನ್ನು ಪುಸಲಾಯಿಸಿ 2025 ಮಾರ್ಚ್–ಏಪ್ರಿಲ್‌ನಲ್ಲಿ ಮೂರು ಬಾರಿ ಅತ್ಯಾಚಾರ ನಡೆಸಿದ್ದ.
ಇನ್ನೊಂದು ಪ್ರಕರಣದಲ್ಲಿ ಇದೆ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲು 2025ರ ಏಪ್ರಿಲ್‌ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಮತ್ತೊಂದು ಪ್ರಕರಣದಲ್ಲಿ ಶಿವರಾಜ ಅಲಿಯಾಸ್ ಸುರಜ್ಯಾ ಜೊತೆಗೆ ಲೈಂಗಿಕವಾಗಿ ಸಹಕರಿಸಿದಂತೆ ತನ್ನೊಂದಿಗೂ ಸಹಕರಿಸಬೇಕು ಎಂದು ಬೆದರಿಸಿ ಅದೇ ಬಾಲಕಿಗೆ 2025ರ ಏಪ್ರಿಲ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಸಂಬಂಧ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿಂದಿನ ಇನ್‌ಸ್ಪೆಕ್ಟರ್ ರಾಘವೇಂದ್ರ ಈ ಮೂವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಲ್ ಚವ್ಹಾಣ, ಮೂವರು ಅಪರಾಧಿಗಳಿಗೆ ಜೈಲು ಸಜೆ ಮತ್ತು ದಂಡ ವಿಧಿಸಿ ವಿಧಿಸಿ ಆದೇಶಿಸಿದ್ದಾರೆ.
ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ನಾಗೇಶ ಅಲಿಯಾಸ್ ಬಾಬು ಪ್ರಕರಣದಲ್ಲಿ 5 ಲಕ್ಷ, ಇನ್ನುಳಿದ ಎರಡು ಪ್ರಕರಣಗಳಲ್ಲಿ ತಲಾ 50 ಸಾವಿರ ಪರಿಹಾರ ನೀಡಬೇಕು ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.
ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.